ಗದಗ 10: ಪಲ್ಸ್ ಪೊಲಿಯೋ ಕಾರ್ಯಕ್ರಮದಡಿ ಜಿಲ್ಲೆಯ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಸರ್ವ ಕ್ರಮ ಕೈಗೊಂಡು ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಬೇಕಾದಂತಹ ಅಗತ್ಯದ ಸಿದ್ದತೆಗಳನ್ನು ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ. ನಿರ್ದೇಶನ ನೀಡಿದರು.
ಗದಗ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿಂದು ಜರುಗಿದ ರಾಷ್ಟ್ರೀಯ ಪಲ್ಸ್ ಪೊಲಿಯೋ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಲ್ಸ ಪೋಲಿಯೋ ಹನಿ ಹಾಗೂ ಜಂತು ಹುಳು ನಿವಾರಣಾ ಮಾತ್ರೆಗಳು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯವಶ್ಯಕವಾಗಿದ್ದು ಮಕ್ಕಳ ಪಾಲಕರು ಹಾಗೂ ಅಂಗನವಾಡಿ, ಶಾಲಾ ಶಿಕ್ಷಕರು ಈ ಕುರಿತು ಕಾಳಜಿ ವಹಿಸಿ ಪ್ರತಿ ಅರ್ಹ ಮಗುವಿಗೆ ಪೋಲಿಯೋ ಲಸಿಕೆ ಹಾಗೂ 19 ವರ್ಷದ ವರೆಗಿನ ಮಕ್ಕಳಿಗೆ ಅಲ್ಬೆಂಡಾಜಲ್ ಮಾತ್ರೆ ನುಂಗುವಿಕೆಗೆ ಆರೋಗ್ಯ ಇಲಾಖೆಗೆ ಸಹಕಾರ ನೀಡಲು ಅಪರ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಗದಗ ಜಿಲ್ಲೆಯಲ್ಲಿರುವ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು. ಇಟ್ಟಿಗೆ ಭಟ್ಟಿ ಹಾಗೂ ಹೊರ ರಾಜ್ಯಗಳಿಂದ ಕಬ್ಬು ಕಟಾವಿಗೆ ಆಗಮಿಸಿದ ಗುಂಪುಗಳಲ್ಲಿ 5 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಅವರಿಗೂ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪೋಲಿಯೋ ಲಸಿಕೆಗಳ ಶೀಥಿಲಿಕರಣಕ್ಕೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರಂತರ ವಿಧ್ಯುತ ಪೂರೈಕೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗ ಸೂಚನೆ ನೀಡಿದ ಅಪರ ಜಿಲ್ಲಾಧಿಕಾರಿಗಳು ಲಸಿಕೆಗಳ ಸಾಗಾಣಿಕೆಗೆ ಅಗತ್ಯದ ವಾಹನ ಸೌಲಭ್ಯ ಒದಗಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ತೆರೆಯಲಾಗಿರುವ ಪೋಲಿಯೋ ಲಸಿಕಾ ಕೇಂದ್ರಗಳ ಕುರಿತು ಸಾರ್ವಜನಿಕರಲ್ಲಿ ಅಗತ್ಯದ ಜಾಗೃತಿಗಾಗಿ ಪ್ರಚಾರ ಕಾರ್ಯ ಕೈಗೊಂಡು ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಚಿಸಿದ ಅವರು ಫೆ. 10ರಂದು ಜರುಗುವ ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮದಡಿ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಅಲ್ಬೆಂಡೆಜೋಲ್ ಮಾತ್ರೆ ನೀಡುವುದರ ಮೂಲಕ ಜಂತುಹುಳು ನಿವಾರಣೆಗೆ ಅಗತ್ಯದ ಕ್ರಮ ಕೈಗೊಳ್ಳಬೇಕು. ಈ ಕುರಿತು ವಿಧ್ಯಾರ್ಥಿಗಳಲ್ಲಿ ಹಾಗೂ ಅವರ ಪಾಲಕರಲ್ಲಿ ಜಾಗೃತಿ ಮೂಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ. ನಿರ್ದೇಶನ ನೀಡಿದರು.
ಜ.19 ರಿಂದ 22ರ ವರೆಗೆ ಪಲ್ಸ ಪೋಲಿಯೋ ಲಸಿಕಾ ಕಾರ್ಯಕ್ರಮ ಜರುಗಲಿದೆ. 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೊಲಿಯೋ ಲಸಿಕೆ ಹಾಕಿಸಬೇಕಲ್ಲದೇ, ಪೊಲಿಯೋ ವೈರಸ್ ಬಗ್ಗೆ 15 ವರ್ಷದೊಳಗಿನ ಮಕ್ಕಳ ಸಮೀಕ್ಷೆ ನಡೆಸಲಾಗುವುದು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪೊಲಿಯೋ ಲಸಿಕೆಯ ಸಂಚಾರಿ ಬೂತ್ಗಳನ್ನು ತೆರೆಯಲಾಗುವುದೆಂದು ಡಾ.ಗಲಗಲಿ ಸಭೆಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಡದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ.ಕರಿಗೌಡರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ರಾಜೇಂದ್ರ ಬಸರಿಗಿಡದ, ಆರ.ಸಿ.ಹೆಚ್ ಅಧಿಕಾರಿ ಬಿ.ಎಮ್.ಗೋಜನೂರ, ಸೇರಿಂದತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.