ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ

National Level Symposium Programme


ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ 

ಹಾವೇರಿ 25: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವು ಐಕ್ಯೂಎಸಿ ಮತ್ತು ಧಾರವಾಡದ ಬಹುಶಿಸ್ತೀಯ ಸಂಶೋಧನಾ ಮತ್ತು ಅಭಿವೃದ್ಧಿ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಭಾರತದಲ್ಲಿ ಕೈಗಾರಿಕೆಗಳ ಬೆಳವಣಿಗೆ ಸವಾಲುಗಳು ಹಾಗೂ ಅವಕಾಶಗಳು ವಿಷಯದಡಿ ನಡೆಯಿತು. 

      ಈ ವಿಚಾರ ಸಂಕಿರಣವನ್ನು ಅಹಮದಾಬಾದನ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ರುದ್ರನಾರಾಯಣ ಮಿಶ್ರಾ ಮತ್ತು ವಿಶ್ರಾಂತ ಪ್ರಾಚಾರ್ಯ ಧಿರೇಂದ್ರ ಏಕಬೊಟೆ ಉದ್ಘಾಟಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಕೈಗಾರಿಕೆಗಳ ಬೆಳವಣಿಗೆ ಮತ್ತು ಸವಾಲುಗಳು ಅತಿ ಅವಶ್ಯಕವಾಗಿವೆ. ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಸಣ್ಣ ಕೈಗಾರಿಕೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ. ಇದಕ್ಕೆ ಹತ್ತಾರು ಕಾರಣಗಳನ್ನು ಕಾರಣಬಹುದಾಗಿದೆ. ಸಣ್ಣ ಕೈಗಾರಿಕೆಗಳು ಬೃಹತ್ ಕೈಗಾರಿಕೆಗಳ ಮೂಲ ಕಚ್ಚಾ ಸಾಮಗ್ರಿಗಳನ್ನು ತಯಾರಿಸಿಕೊಡುವ ಮೂಲಕ ತಮ್ಮ ಅಸಿತ್ವ ಕಂಡುಕೊಂಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಅಗತ್ಯ ಭೂಮಿ, ಕಚ್ಚಾ ಸಾಮಗ್ರಿ,ವಿದ್ಯುತ್, ಸಂಪನ್ಮೂಲ ಸಿಬ್ಬಂದಿ ಹೀಗೆ ಹತ್ತಾರು ಸವಾಲುಗಳಿಂದಾಗಿ ನೆಲಕಚ್ಚಿವೆ ಎಂದು ವಿವರಿಸಿದರು. 

      ಈ ವಿಚಾರ ಸಂಕಿರಣದಲ್ಲಿ ಸುಮಾರು 70ಜನ ವಿದ್ಯಾರ್ಥಿ ಮತ್ತು ಉಪನ್ಯಾಸಕರು ತಮ್ಮ ಪ್ರಬಂಧವನ್ನು ಮಂಡಿಸಿದರು. ಇದರಲ್ಲಿ 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಂಶೋಧನಾರ್ಥಿಗಳು ಭಾಗವಹಿಸಿದ್ದರು. 

         ಈ ವೇಳೆ ಧಾರವಾಡದ ಬಹುಶಿಸ್ತೀಯ ಸಂಶೋಧನಾ ಮತ್ತು ಅಭಿವೃದ್ಧಿ ಅಧ್ಯಯನ ಕೇಂದ್ರದ ಸಂಯೋಜಕ ಸಿದ್ದಲಿಂಗಸ್ವಾಮಿ ಹನಗುಂಡಿಮಠ, ಪ್ರಕಾಶ ಹೊಸಮನಿ, ಕೆನರಾ ಬ್ಯಾಂಕ್ ಎಜಿಎಂ ಮೇದಾ ಸಂಜೀವಕುಮಾರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಎರಡು ಚರ್ಚಾ ಗೋಷ್ಠಿಯನ್ನು ನಡೆಸಲಾಯಿತು.ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಫರ್ಜಾನ ಪಠಾಣ ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಜೆ.ಸಿ. ಇಂಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.