ವಿಜಯಪುರ ಡಿಸೆಂಬರ್ 9 : ನಗರದ ಮಹಾತ್ಮ ಗಾಂಧಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಕೆ.ಡಿ.ಗುಂಡಬಾವಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ 1 ರಿಂದ 19 ವರ್ಷದ ಎಲ್ಲ ಮಕ್ಕಳಿಗೆ ಅಂಗನವಾಡಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಜಂತುಹುಳ ನಾಶಕ ಮಾತ್ರೆಯನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ. ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದಂದು ಜಂತುಹುಳು ನಾಶಕ ಮಾತ್ರೆ ನೀಡದೇ ಬಾಕಿ ಇರುವ ಮಕ್ಕಳಿಗೆ 16 ಡಿಸೆಂಬರ್ 2024 ರಂದು ಮಾಪ-ಆಫ್ ದಿನದಂದು ಮಾತ್ರೆಗಳನ್ನು ನೀಡಲಾಗುತ್ತದೆ. ಎಲ್ಲ ಮಕ್ಕಳು ಸದರಿ ಮಾತ್ರೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
1 ರಿಂದ 19 ವರ್ಷದ ವಯಸ್ಸಿನ ಮಕ್ಕಳಿಗೆ ಜಂತು ಹುಳು ನಿವಾರಣಾ ಅಲ್ಬೆಂಡೊಝೇಲ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ. ಜಂತುಹುಳು ಬಾದೆಯಿಂದ ಮಕ್ಕಳು ಅಪೌಷ್ಟಿಕತೆ, ರಕ್ತಹೀನತೆ,ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳ ಮತ್ತು ಹದಿಹರೆಯದವರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ಆರು ತಿಂಗಳಿಗೆ 1 ಸಲದಂತೆ ಅಲ್ಬೆಂಡೊಝೇಲ್ ಮಾತ್ರೆಯನ್ನು ಕಡ್ಡಾಯವಾಗಿ ಸೇವಿಸಬೇಕು ಎಂದು ಹೇಳಿದರು.
ಡಾಽಽ ಮಂಜುನಾಥ ಪೋಳ ಜಂತು ಹುಳು ಸೋಂಕಿನ ಲಕ್ಷಣ ಹಾಗೂ ದುಷ್ಟಪರಿಣಾಮಗಳ ಬಗ್ಗೆ ತಿಳಿಸಿದರು.
ಮಹಾತ್ಮ ಗಾಂಧಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಅಧ್ಯಕರಾದ ಎಸ್ ಟಿ ಪೋಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮಾಹದೇವ ನೀಲಂಗಿ, ಶ್ರೀಮತಿ ಎನ್.ಬಿ ಚೌಧರಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಶಾಲಾ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಶ್ರೀಮತಿ ಸಾವಿತ್ರಿ ಹಿಪ್ಪರಗಿ ನಿರೂಪಿಸಿದರು ಮತ್ತು ಪಿ.ಬಿ ಜೋಗಣ್ಣವರ ವಂದಿಸಿದರು.