ಕರಾಚಿ, ಡಿ 23, ಪಾಕಿಸ್ತಾನದ
16ರ ಪ್ರಾಯದ ಯುವ ವೇಗಿ ನಾಸೀಮ್ ಶಾ ಅವರು ಐದು ವಿಕೆಟ್ ಪಡೆದು ವಿಶ್ವದ ಅತ್ಯಂತ ಕಿರಿಯ ವೇಗದ ಬೌಲರ್
ಎಂಬ ದಾಖಲೆ ಮಾಡುವ ಮೂಲಕ ಇತಿಹಾಸದ ಪುಟ ಸೇರಿದರು.ಇಲ್ಲಿನ, ನ್ಯಾಷನಲ್ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ
ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ನಾಸೀಮ್ 32 ರನ್ ನೀಡಿ ಐದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ
ಪಾಕಿಸ್ತಾನ 263 ರನ್‌ಗಳಿಂದ ಜಯ ಸಾಧಿಸಿತು. ಜತೆಗೆ, ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಆತಿಥೇಯರು
ಮುಡಿಗೇರಿಸಿಕೊಂಡರು.ಐದು ವಿಕೆಟ್ ಪಡೆಯುವ ಮೂಲಕ ನಾಸೀಮ್ ಶಾ ಅವರು ಮೊಹಮ್ಮದ್ ಅಮೀರ್ ಅವರ ದಾಖಲೆಯನ್ನು
ಮುರಿದರು. ಅಮೀರ್ 17 ವರ್ಷ ಮತ್ತು257 ದಿನಗಳಲ್ಲಿ ಐದು ವಿಕೆಟ್ ಪಡೆದಿದ್ದರು. ಇದೀಗ ನಾಸೀಮ್ ಶಾ
16 ವರ್ಷ ಮತ್ತು 307 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ.ನಾಸೀಮ್ ಅವರು ತಮ್ಮದೇ ದೇಶದ ಎಡಗೈ ಸ್ಪಿನ್ನರ್
ನಾಸೀಮ್-ಉಲ್- ಘನಿ ಅವರೊಂದಿಗೆ ಸಾಧನೆಯನ್ನು ಸರಿದೂಗಿಸಿದ್ದಾರೆ. 1959ರಲ್ಲಿ ನಾಸೀಮ್-ಉಲ್-ಘನಿ ವೆಸ್ಟ್
ಇಂಡೀಸ್ ವಿರುದ್ಧ ಜಾರ್ಜ್‌ಟೌನ್‌ನಲ್ಲಿ ಐದು ವಿಕೆಟ್ ಪಡೆದಿದ್ದರು.ಪಾಕಿಸ್ತಾನ ನೀಡಿದ್ದ 476 ರನ್
ಗುರಿ ಹಿಂಬಾಲಿಸಿದ ಶ್ರೀಲಂಕಾ, ನಾಸೀಮ್ ಶಾ ಅವರ ಮಾರಕ ದಾಳಿಗೆ ನಲುಗಿ 212 ರನ್‌ಗಳಿಗೆ ಆಲೌಟ್ ಆಗಿತ್ತು.
ಒಶಾಡ ಫೆರ್ನಾಂಡೊ ಲಂಕಾ ಪರ 102 ರನ್ ಗಳಿಸಿದ್ದರು.ಐದನೇ ದಿನವಾದ ಇಂದು ಪಾಕಿಸ್ತಾನ, ಶ್ರೀಲಂಕಾ
ತಂಡದ ಇನ್ನುಳಿದ ಮೂರು ವಿಕೆಟ್‌ಗಳನ್ನು ಕೇವಲ 16 ಎಸೆತಗಳಲ್ಲಿ ಆಲೌಟ್ ಮಾಡಿತು. 2009 ರ ಬಳಿಕ ಪಾಕಿಸ್ತಾನದಲ್ಲಿ ನಡೆದ ಮೊಟ್ಟ ಮೊದಲ ಟೆಸ್ಟ್ ಸರಣಿ ಇದಾಯಿತು. ಮೊದಲ ಪಂದ್ಯ
ಡ್ರಾ ಆಗಿತ್ತು.