ನರೇಗಾ ದಿನಾಚರಣೆ ಕಾರ್ಯಕ್ರಮ

Narega Day Program- Yaragatti

ಯರಗಟ್ಟಿ 14: ಸಮೀಪದ ಭಂಡಾರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳೂರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಸೋಮವಾರ ಹಮ್ಮಿಕೊಂಡ ನರೇಗಾ ದಿನಾಚರಣೆ ಕಾರ್ಯಕ್ರಮವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಆನಂದ ಬಡಕುಂದ್ರಿ ರವರು ಸಸಿಗೆ ನೀರು ಹಣಿಸುವ ಮೂಲಕ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಆನಂದ ಬಡಕುಂದ್ರಿ ರವರು ಮಾತನಾಡಿ ಗ್ರಾಮೀಣ ಭಾಗದ ಜನರು ಉದ್ಯೋಗವನ್ನು ಅರಸಿ ಬೇರೆ ಪ್ರದೇಶಗಳಿಗೆ ದುಡಿಯಲು ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ದುಡಿಯುವ ಕೈಗಳಿಗೆ ಸ್ವ-ಗ್ರಾಮದಲ್ಲಿಯೇ ಉದ್ಯೋಗವನ್ನು ನೀಡಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪ್ರಾರಂಭ ಮಾಡಿದರು. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಕೂಲಿ ಕೆಲಸವನ್ನು ನೀಡಿ ಗಂಡು ಹೆಣ್ಣಿಗೆ ಸಮಾನ ಕೂಲಿಯನ್ನು ನೀಡುತ್ತಿರುವುದರಿಂದ ಗುಳೆ ಹೋಗುವುದನ್ನು ತಪ್ಪಿಸಿದಂತಾಗಿದೆ. ನರೇಗಾ ಕೂಲಿ ಕೆಲಸ ಮಾಡುವುದರ ಜೊತೆಗೆ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೂಡಾ ಮಾಡಿಕೊಳ್ಳಬಹುದು ಹಾಗಾಗಿ ಪ್ರತಿಯೊಂದು ಕುಟುಂಬ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.ಬಳಿಕ ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ) ಆರ್ ಬಿ ರಕ್ಕಸಗಿ ರವರು ಮಾತನಾಡಿ ಮನರೇಗಾ ಯೋಜನೆಯು ಯಾವಾಗ ಪ್ರಾರಂಭವಾಯಿತು ಹಾಗೂ ಈ ಯೋಜನೆ ಉದ್ದೇಶದ ಕುರಿತು ತಿಳಿಸಿದರು. ಮನರೇಗಾ ಯೋಜನೆಯಡಿ ಕೂಲಿ ಕೆಲಸದ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ ನಿರ್ಮಾಣ, ಬದು ನಿರ್ಮಾಣ, ಇಂಗು ಗುಂಡಿ ನಿರ್ಮಾಣ, ದನದ ಶೆಡ್, ಕುರಿ ಶೆಡ್, ಕೋಳಿ ಶೆಡ್ ಸೇರಿಂದತೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಆದುದರಿಂದ ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. 

ಇದೇ ವೇಳೆ 2023-24 ನೇ ಸಾಲಿನಲ್ಲಿ ಮನರೇಗಾ ಯೋಜನೆಯಡಿ 100ದಿನ ಕೂಲಿ ಕೆಲಸವನ್ನು ಪೂರೈಸಿದ ಕೂಲಿಕಾರರಿಗೆ ಸನ್ಮಾನಿಸಲಾಯಿತು. ಇದೇ ವೇಳೆ ನರೇಗಾ ದಿನಾಚರಣೆ ಪ್ರಯುಕ್ತ ಸಸಿ ನೆಡಲಾಯಿತು.  

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಮೇಶ ಬೆಟಸೂರ, ಗ್ರಾಪಂ ಅಧ್ಯಕ್ಷೆ ಮೀರಾಜಬಿ ಅಲ್ಲಿಸಾಬ ಮಿರ್ಜಿ, ಶಿಂದೋಗಿ ಗ್ರಾಪಂ ಅಧ್ಯಕ್ಷ ಡಿ ಡಿ ಟೋಪೋಜಿ, ತಾಪಂ ಎಂಐಎಸ್ ಸಂಯೋಜಕ ನಾಗರಾಜ ಬೆಹರೆ, ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಮೌಲಾಸಾಬ ಧಾರವಾಡ, ಲಕ್ಷ್ಮಿ ಜೀವಾಪೂರ, ಜಮಾಲನಾಯ್ಕ ದೊಡಮನಿ,ಫಕೀರ​‍್ಪ ಚಂದರಗಿ, ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು,ತಾಂತ್ರಿಕ ಸಹಾಯಕರು, ತಾಪಂ ಆಡಳಿತ ಸಹಾಯಕರು, ಬಿಎಫ್ ಟಿ, ಕಾಯಕ ಮಿತ್ರರು ಮತ್ತು ಗ್ರಾಮ ಪಂಚಾಯತ ಸಿಬ್ಬಂದಿಗಳು, ಕೂಲಿಕಾರರು, ಗ್ರಾಮಸ್ಥರು ಇನ್ನಿತರರು ಉಪಸ್ಥಿತರಿದ್ದರು. ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ ನಿರೂಪಿಸಿದರು, ಪಿಡಿಓ ರಮೇಶ ಬೆಡಸೂರ ಸ್ವಾಗತಿಸಿದರು.