ರಾಜ್ಯ ಬಿಜೆಪಿ ಪೂರ್ಣಾವಧಿ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಸರ್ವಾನುಮತದಿಂದ ಆಯ್ಕೆ

nalinkumar

ಬೆಂಗಳೂರು, ಜ 16: ರಾಜ್ಯ ಬಿಜೆಪಿ ಹಂಗಾಮಿ ಅಧ್ಯಕ್ಷರಾಗಿದ್ದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಮೂರು ವರ್ಷಗಳ ಪೂರ್ಣಾವಧಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 

ಬೆಂಗಳೂರು ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ಗುರುವಾರ ಪಕ್ಷದ ರಾಜ್ಯ ಚುನಾವಣಾ ವೀಕ್ಷಕ, ರಾಷ್ಟ್ರೀಯ ಚುನಾವಣಾ ಸಹ ಚುನಾವಣಾಧಿಕಾರಿ ಹಾಗೂ ಸಚಿವ ಸಿ.ಟಿ.ರವಿ,  ರಾಜ್ಯ ಚುನಾವಣಾಧಿಕಾರಿ ಹಾಗೂ ಬಿಜೆಪಿ ವಕ್ತಾರ  ಅಶ್ವಥ್ ನಾರಾಯಣ್, ಉಪಚುನಾವಣಾಧಿಕಾರಿ ಹಾಲಪ್ಪ ಆಚಾರ್ ಅವರು ನಳಿನ್ ಕುಮಾರ್ ಕಟೀಲ್ ಹೆಸರನ್ನು ಘೋಷಣೆ ಮಾಡಿ, ಅವರಿಗೆ ಪ್ರಮಾಣಪತ್ರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ, ಮೂರು ವರ್ಷಗಳ ಅವಧಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಅಧ್ಯಕ್ಷರನ್ನು ಆಯ್ಕೆ ಮಾಡಲು 252 ಅರ್ಹ ಮತದಾರರ ಪಟ್ಟಿ ಸಿದ್ಧಪಡಿಸಲಾಗಿತ್ತು. ಇಂದು ಬೆಳಿಗ್ಗೆ ಇಪ್ಪತ್ತು ಸೂಚಕರು ಅವರ ಹೆಸರು ಸೂಚಿಸಿದ್ದರು. ಅಧ್ಯಕ್ಷರ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದ್ದರಿಂದ ಮತ್ತು ನಾಮಪತ್ರ ಊರ್ಜಿಗೊಂಡಿರುವುದರಿಂದ ನಳಿನ್ ಕುಮಾರ್ ಕಟೀಲ್ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು. 

ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತಿದ್ದೇನೆ. ಕಳೆದ ಆರು ತಿಂಗಳಲ್ಲಿ ಸಂಘಟನೆಗೆ ಒತ್ತು ನೀಡಿ ಅನೇಕ ಕೆಲಸಗಳು ನಡೆದಿವೆ. ರಾಜ್ಯದ 58,700 ಮತಗಟ್ಟೆಗಳ ಪೈಕಿ 47,300 ಮತಗಟ್ಟೆಗಳಿಗೆ, 306 ಮಂಡಲಗಳ ಪೈಕಿ 264 ಮಂಡಲಗಳಿಗೆ, 37 ಜಿಲ್ಲೆಗಳ ಪೈಕೆ 20 ಜಿಲ್ಲೆಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಎಲ್ಲರ ಇಚ್ಛೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.