ಬೆಳಗಾವಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆಗೆ ನಳಿನ್ ಕುಮಾರ್ ಕಟೀಲ್ ಚಾಲನೆ

 ಬೆಳಗಾವಿ, ಅ 3:  ಮಹಾತ್ಮಾ ಗಾಂಧೀಜಿಯವರ ತತ್ವ ಆದರ್ಶಗಳನ್ನು ಜನತೆಗೆ ಮುಟ್ಟಿಸುವ ಉದ್ದೇಶದಿಂದ ಬಿಜೆಪಿ ಹಮ್ಮಿಕೊಂಡಿರುವ ಗಾಂಧಿ ಸಂಕಲ್ಪ ಯಾತ್ರೆಗೆ ಬೆಳಗಾವಿಯಲ್ಲಿಂದು ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗಾಂಧೀಜಿಯವರು ಪಾದಸ್ಪರ್ಶ ಮಾಡಿದ ಐತಿಹಾಸಿಕ ಸ್ಥಳ ಬೆಳಗಾವಿಯ ವೀರಸೌಧದ ಎದುರು ಸಂಕಲ್ಪ ಯಾತ್ರೆಗೆ ಚಾಲನೆ ನೀಡುವ ಅವಕಾಶ ದೊರೆತಿರುವುದು ಸುಯೋಗ. ಗಾಂಧೀಜಿಯವರು ತಮ್ಮ ಸತ್ಯ ಅಂಹಿಸೆಯ ಅಸ್ತ್ರಗಳ ಪ್ರಯೋಗದ ಹೋರಾಟದ ಮೂಲಕ ಜನರ ಮನಗೆದ್ದು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ಒದಗಿಸಿದ್ದರು. ಗ್ರಾಮಗಳ ಸ್ವರಾಜ್ಯ, ಸ್ವದೇಶಿ ಪರಿಕಲ್ಪನೆಯಂದು ಆದರ್ಶಗಳು ಸದೃಢ ಭಾರತ ನಿರ್ಮಾಣಕ್ಕೆ ಪ್ರೇರಣೆಗಳಾಗಿವೆ ಎಂದು ಹೇಳಿದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಪಾದಯಾತ್ರೆಯ ಮೂಲಕ ಗಾಂಧೀಜಿಯವರ ತತ್ವ, ಆದರ್ಶ ಹಾಗೂ ಹೋರಾಟವನ್ನು ಮನೆ ಮನೆಗೆ ಮುಟ್ಟಿಸುವುದೇ ಗಾಂಧೀ ಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ.  ಗಾಂಧೀಜಿಯವರ ಕನಸಿನಂತೆ ಕೇಂದ್ರ ಸರ್ಕಾರ ಜಾರಿಗೆ ತಂದು ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸುವ ಸಂಕಲ್ಪವಾಗಿದೆ ಎಂದು ಹೇಳಿದರು. ಇದಕ್ಕೂ ಮೊದಲು ಐತಿಹಾಸಿಕದ ಸ್ಥಳ ಕಾಂಗ್ರೆಸ್ ಬಾವಿಯ ವೀರಸೌಧಕ್ಕೆ ತೆರಳಿದ ಸಚಿವ ಸುರೇಶ ಅಂಗಡಿ, ನಳಿನ್ ಕುಮಾರ್ ಕಟೀಲ್ ಹಾಗೂ ಇತರೆ ಬಿಜೆಪಿ ಮುಖಂಡರು ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.  ವೀರಸೌಧದಲ್ಲಿ ಪ್ರದರ್ಶಿಸಲಾದ ಗಾಂಧೀಜಿಯವರ ಐತಿಹಾಸಿಕ ಭಾವಚಿತ್ರಗಳನ್ನು ವೀಕ್ಷಿಸಿದರು. ಶಾಸಕರಾದ ಅಭಯ ಪಾಟೀಲ,  ಬಿಜೆಪಿ ಮುಖಂಡರಾದ ರಾಜೇಂದ್ರಕುಮಾರ ಹರಕುಣಿ, ಎಂ.ಬಿ. ಜಿರಲಿ, ಸಂಜಯ ಪಾಟೀಲ ಸೇರಿದಂತೆ  ಅನೇಕರು ಪಾಲ್ಗೊಂಡಿದ್ದರು.  ನೂರಾರು ಬಿಜೆಪಿ ಕಾರ್ಯಕರ್ತರು ಗಾಂಧೀಜಿಯವರ ತತ್ವ  ಸಿದ್ದಾಂತ ಹಾಗೂ ಆದರ್ಶಗಳನ್ನು ಬಿಂಬಿಸುವ ಭಿತ್ತಿಪತ್ರಗಳ ಮೂಲಕ ಘೋಷಣೆ ಕೂಗುತ್ತ  ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿದರು. ಇದಕ್ಕೂ ಮೊದಲು ವೀರಸೌಧದ ಹತ್ತಿರವ ಹಮ್ಮಿಕೊಂಡ ಉದ್ಘಾಟನಾ ಸಮಾರಂಭ ಜರುಗಿತು.