ನಾಗಪುರ, ಮಾ. 25 : ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು 17 ನೇ ಲೋಕಸಭಾ ಚುನಾವಣೆಗಾಗಿ ನಾಗಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ಸಚಿವ ಗಡ್ಕರಿ ಅವರ ಜೊತೆ ರಾಮ್ಟೆಕ್ ಲೋಕಸಭಾ ಕ್ಷೇತ್ರದಿಂದ ಶಿವಸೇನೆಯ ಕ್ರುಪಾಲ್ ಟ್ಯುಮೇನ್ ಅವರು ಕೂಡ ಉಮೇದುವಾರಿಕೆ ಸಲ್ಲಿಸಿದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಬಿಜೆಪಿ-ಶಿವಸೇನೆಯ ಸಾವಿರಾರು ಕಾರ್ಯಕರ್ತರು ಇಬ್ಬರು ನಾಯಕರ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಹಾಜರಿದ್ದರು.
ಬಳಿಕ ಮಾತನಾಡಿದ ಗಡ್ಕರಿ ಅವರು, ಬಿಜೆಪಿ ಸರಕಾರದ ಅಧಿಕಾರಾವಧಿಯಲ್ಲಿ ಹಲವು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಇದರಿಂದ ಗೆಲುವಿನ ಬಗ್ಗೆ ಯಾವುದೇ ಅಳಕು ಇಲ್ಲ ಎಂದು ವಿಶ್ವಾಸದಿಂದ ಹೇಳಿದರು.
ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾನಾ ಪಟೋಲ್ ಮತ್ತು ಕಿಶೋರ್ ಗಜ್ಬಿಯಾ ಕ್ರಮವಾಗಿ ನಾಗಪುರ ಮತ್ತು ರಾಮ್ಟೆಕ್ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದರು.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ತಪ್ಪು ಆರ್ಥಿಕ ನೀತಿ, ಜನವಿರೋಧಿ ರೈತ ವಿರೋಧಿ ನೀತಿ ವಿಷಯ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲುತ್ತೇವೆ. ಶ್ರೀಮಂತರು ಮತ್ತು ಬಡವರ ನಡುವೆ ಅಸಮಾನತೆ ಹೆಚ್ಚಿದೆ ಎಂದು ಪಟೋಲ್ ಹೇಳಿದರು. ಏಪ್ರಿಲ್ 11ರಂದು ನಡೆಯಲಿರುವ ಲೋಕಸಭೆಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ.