ಎನ್‌.ಎಸ್‌.ಎಸ್ ಗ್ರಾಮಗಳ ಸವಾಂರ್ಗೀಣ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತದೆ: ಪ್ರೊ. ಶಾಂತಾದೇವಿ ಟಿ

NSS plays an important role in the overall development of villages: Prof. Shantadevi T

ವಿಜಯಪುರ 15: ಎನ್‌.ಎಸ್‌.ಎಸ್ ಗ್ರಾಮೀಣ ಪ್ರದೇಶಗಳ ಸವಾಂರ್ಗೀಣ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಹೇಳಿದರು.  

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‌.ಎಸ್‌.ಎಸ್ ಕೋಶ ಮತು ಗಾಂಧಿ ಅಧ್ಯಯನ ಕೇಂದ್ರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆಯುವ ಸಬಲೀಕರಣ ಮತ್ತು ಕ್ರೀಡೆ, ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ “ಗಾಂಧಿ ಚಿಂತನೆಗಳ ಮೂಲಕ ಮಾನವೀಯ ಮೌಲ್ಯಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಯ ಜವಾಬ್ದಾರಿ”  ಈ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಗಾಂಧೀಜಿಯ ಸತ್ಯ ಮತ್ತು ಅಹಿಂಸಾ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ, ಸ್ವಚ್ಛತಾ ಕಾರ್ಯಗಳು, ಶಿಕ್ಷಣ ಮತ್ತು ಆರೋಗ್ಯ ಜಾಗೃತಿಯ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜಾಗೃತಿ ಅಭಿಯಾನಗಳ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ. ಸ್ವಯಂಸೇವಕರು ಸಣ್ಣ-ಸಣ್ಣ ಸೇವಾ ಕಾರ್ಯಗಳನ್ನು ಮಾಡಿ ಮಹತ್ತರ ಸಾಧನೆಗಳನ್ನು ಸಾಧಿಸಬಹುದು. ಇದರಿಂದ ಸಮಾಜದಲ್ಲಿ ಹೊಣೆಗಾರಿಕೆಯನ್ನು ಬೆಳೆಸುವುದು ಮಾತ್ರವಲ್ಲದೆ, ಯುವಕರಲ್ಲಿ ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವವನ್ನು ಉತ್ತೇಜಿಸುವುದಕ್ಕೂ ಸಹಾಯಕವಾಗುತ್ತದೆ ಎಂದರು.  

ಇದೇ ಸಂದರ್ಭದಲ್ಲಿ  ಬೆಂಗಳೂರಿನ ಕರ್ನಾಟಕ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡಿ. ಪಿ. ಕೃಷ್ಣ ಮಾತನಾಡಿ, ಗಾಂಧೀಜಿಯವರು ರಾಜಕೀಯ ಕಾರ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದರು ಹಿ ಸಂಸದೀಯ ಕೆಲಸ ಮತ್ತು ರಚನಾತ್ಮಕ ಕೆಲಸ. ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಯುವಪೀಳಿಗೆ ದಾರಿ ತಪ್ಪುತ್ತಿರುವುದು ಸತ್ಯ. ಇದರಿಂದ ತಪ್ಪಿಸಿಕೊಳ್ಳಲು ಗಾಂಧೀಜಿಯವರ ವಿಚಾರಗಳ ಬಗ್ಗೆ ಚಿಂತನೆ ಮಾಡುವುದು, ಅವರನ್ನು ಓದಿ, ಅರ್ಥೈಸಿಕೊಳ್ಳುವುದು ಮತ್ತು ಪ್ರಶ್ನೆ ಮಾಡಿಕೊಳ್ಳುವುದು ಅಗತ್ಯವಾಗಿದೆ. “ಗಾಂಧೀಜಿಯವರ ಮೌಲ್ಯಗಳು ಉಳಿಯದೆ ಹೋದರೆ, ದೇಶ ಉಳಿಯುವುದಿಲ್ಲ” ಎಂಬ ಅವರ ಮಾತು ಇಂದು ಸಹ ಪ್ರಸ್ತುತವಾಗಿದೆ ಎಂದರು.  

ಈ ಕಾರ್ಯಾಗಾರದಲ್ಲಿ ಮೂರು ಗೋಷ್ಠಿಗಳನ್ನು ನಡೆಸಲಾಯಿತು. ಮೊದಲನೆ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ‘ಕಾಯಕ ನಿಷ್ಠೆ’ ಎಂಬ ವಿಷಯದ ಕುರಿತು ವಿಷಯವನ್ನು ಮಂಡಿಸಿದರು. ಅಧ್ಯಕ್ಷತೆಯನ್ನು ಪ್ರೊ.ಪಿ.ಜಿ.ತಡಸದ ವಹಿಸಿದ್ದರು. ಎರಡನೆಯ ಗೋಷ್ಠಿಯನ್ನು ಡಾ.ಅಬೀದಾ ಬೇಗಂ ‘ಗಾಂಧೀಜಿಯವರ ಪ್ರಸ್ತುತ ಸಮಸ್ಯೆಗಳು ಮತ್ತು ಎನ್‌.ಎಸ್‌.ಎಸ್ ಅಧಿಕಾರಿಯ ಜವಾಬ್ದಾರಿ’ ಎಂಬ ವಿಷಯದ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರೊ.ಓಂಕಾರ ಕಾಕಡೆ ವಹಿಸಿದ್ದರು. ಮೂರನೇ ಗೋಷ್ಠಿಯಲ್ಲಿ ಲಕ್ಷ್ಮೀದೇವಿ ವೈ ‘ಮಹಿಳೆಯರ ವ್ಯಕ್ತಿತ್ವ ವಿಕಸನದಲ್ಲಿ ಎನ್‌.ಎಸ್‌.ಎಸ್‌ನ ಪಾತ್ರ’ ಎಂಬ ವಿಷಯದ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರೊ.ಸಕ್ಪಾಲ್ ಹೂವಣ್ಣ ವಹಿಸಿದ್ದರು. 

ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ ವಹಿಸಿ ಮಾತನಾಡಿದರು. ಬೆಂಗಳೂರಿನ ಕರ್ನಾಟಕ ಸ್ಮಾರಕ ನಿಧಿ ಉಪಾಧ್ಯಕ್ಷರು ಪ್ರೊ. ಎಸ್‌.ಜಿ.ಸಿದ್ದರಾಮಯ್ಯ, ಡಾ. ಅಬಿದಾ ಬೇಗಂ, ಎನ್‌ಎಸ್‌.ಎಸ್ ಕೋಶದ ಸಂಯೋಜಕ ಪ್ರೊ. ಅಶೋಕಕುಮಾರ ಸುರಪುರ, ವಿವಿಧ ಜಿಲ್ಲೆಯ ಎನ್‌.ಎಸ್‌.ಎಸ್ ಕಾರ್ಯಕ್ರಮ ಅಧಿಕಾರಿಗಳು ಹಾಗೂ ವಿವಿಧ ವಿಭಾಗಗಳ  ವಿದ್ಯಾರ್ಥಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು.  

ಸಮಾರಂಭದಲ್ಲಿ ಅಮರನಾಥ ಪ್ರಜಾಪತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.