ನವದೆಹಲಿ, ಫೆ.3, ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಸಮಸ್ಯೆಗಳನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳು ಸೋಮವಾರ ಭಾರೀ ಗದ್ದಲ, ಕೋಲಾಹಲವೆಬ್ಬಿಸಿದ್ದರಿಂದ ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದ ಪ್ರಸಂಗ ನಡೆಯಿತು.ಕೆಲವು ಸದಸ್ಯರು ಈ ಸಮಸ್ಯೆಯನ್ನು 267 ನಿಯಮದಡಿ ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಆದರೆ ಸಭಾಪತಿ ಎಂ.ವೆಂಕಯ್ಯನಾಯ್ಡು ಅವಕಾಶ ನಿರಾಕರಿಸಿದರು.
ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ ಮತ್ತು ಇತರರು ಸೇರಿದಂತೆ ಪ್ರತಿಪಕ್ಷದ ಸದಸ್ಯರು ನಿಯಮ 267 ರ ಅಡಿಯಲ್ಲಿ ನೀಡಿರುವ ನೋಟಿಸ್‌ಗಳನ್ನು ತಿರಸ್ಕರಿಸಿದ ವೆಂಕಯ್ಯ ನಾಯ್ಡು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸದಸ್ಯರಿಗೆ ಈ ವಿಷಯದ ಬಗ್ಗೆ ಮಾತನಾಡಲು ಸಾಕಷ್ಟು ಸಮಯ ಸಿಗುತ್ತದೆ ಎಂದು ಸಮಾಧಾನಪಡಿಸಲು ಯತ್ನಿಸಿದರು.ಬಿಎಸ್‌ಪಿ ಸದಸ್ಯ ಸತೀಶ್ ಚಂದ್ರ ಮಿಶ್ರಾ ಅವರು ಎನ್‌ಆರ್‌ಸಿ ಸಮಸ್ಯೆಗಳನ್ನು ಪ್ರಸ್ತಾಪಿಸಲು ಎದ್ದುನಿಂತಾಗ, ನಾಯ್ಡು ಅವರು ಮಧ್ಯಪ್ರವೇಶಿಸಿ, ಈಗಾಗಲೇ ನೋಟಿಸ್‌ಗಳ ಕುರಿತು ತೀರ್ಪು ನೀಡಿದ್ದೇನೆ, ಹೀಗಿರುವಾಗ ಈ ವಿಷಯದ ಬಗ್ಗೆ ಮಾತನಾಡಲು ಯಾವುದೇ ಸದಸ್ಯರಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಆಗ ಸತೀಶ್ ಚಂದ್ರ ಮಿಶ್ರಾ ಅವರೊಂದಿಗೆ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್, ಕಾಂಗ್ರೆಸ್ ಸದಸ್ಯ ಆನಂದ್ ಶರ್ಮಾ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸದಸ್ಯ ಡೆರೆಕ್ ಒ ’ಬ್ರಿಯಾನ್ ಮತ್ತು ಇತರರು ತಮ್ಮ ಸ್ಥಾನಗಳಲ್ಲಿ ಎದ್ದು ನಿಂತು ಮಾತನಾಡಲು ಅವಕಾಶ ಕೋರಿದರು. ವಿರೋಧ ಪಕ್ಷದ ಸದಸ್ಯರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸುವಾಗ ಗದ್ದಲ ಏರ್ಪಟ್ಟಾಗ ವೆಂಕಯ್ಯ ನಾಯ್ಡು ಅವರು ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.