ನವದೆಹಲಿ, ಮಾ13 :ದೇಶದಲ್ಲಿ ಪ್ರಸ್ತುತ ಕೊರೊರಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಐಪಿಎಲ್ ಸೇರಿದಂತೆ ರಾಷ್ಟ್ರರಾಜಧಾನಿಯಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಐಪಿಎಲ್ ನಡೆಯುವ ಕುರಿತು ಅನುಮಾನ ಇನ್ನಷ್ಟು ಹೆಚ್ಚಾದಂತಾಗಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ಸಿಸೋಡಿಯಾ, "ಐಪಿಎಲ್ ನಂತಹ ಅಪಾರ ಜನ ಸಮೂಹ ಸೇರುವ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನಿಷೇಧಿಸಲು ನಾವು ನಿರ್ಧರಿಸಿದ್ದೇವೆ. ಕೊರೊನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರವು ಮುಖ್ಯವಾಗುತ್ತದೆ" ಎಂದಿದ್ದಾರೆ.ದೆಹಲಿ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ಎಂಪಿ ಸಂಜಯ್ ಸಿಂಗ್ ಸಹ ಸ್ವಾಗತಿಸಿದ್ದು, ಕೊರಾನಾ ವೈರಸ್ ತಡೆಗಟ್ಟಲು ಜನ ಸಮೂಹ ಸೇರುವುದನ್ನು ತಡೆಗಟ್ಟುವುದು ಒಂದು ಕ್ರಮವಾಗಿದೆ ಎಂದಿದ್ದಾರೆ. ಮಾರ್ಚ್ 29 ರಂದು ಆರಂಭವಾಗಬೇಕಿರುವ ಐಪಿಎಲ್ ವೇಳಾಪಟ್ಟಿಯಲ್ಲಿ ದೆಹಲಿ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದ ಆತಿಥ್ಯದಲ್ಲಿ ಏಳು ಪಂದ್ಯಗಳು ನಿಗದಿಯಾಗಿವೆ.