ತಿರುಚಿನಾಪಳ್ಳಿ, ನ 30-ತಮಿಳುನಾಡಿನ ತಿರುಚಿನಾಪಳ್ಳಿ ಹಾಗೂ ತಂಜಾವೂರು ಜಿಲ್ಲೆಗಳಲ್ಲಿ ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾದ ಶಂಕಿತರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ - ಎನ್ ಐ ಎ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಶೋಧನೆ ನಡೆಸಿದರು.
ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಎಡಮಲೈಪಟ್ಟಿಪುದೂರಿನ ಶ್ರೀನಿವಾಸ ನಗರ್ ಬಡಾವಣೆಯ ಸಾರಾಬುದ್ದೀನ್ (28) ಎಂಬ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿ ಶೋಧನೆ ನಡೆಸಿದರು. ಮತ್ತೊಂದು ತಂಡ ನಗರದ ಹೊರವಲಯದ ಇನಾಂ ಕುಳತ್ತೂರಿನ ಮನೆಯೊಂದರ ಮೇಲೆ ಶೋಧನೆ ನಡೆಸಿತು.
ಸಾರಾಬುದ್ದೀನ್ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರೊಂದಿಗೆ ಹೊಂದಿರುವ ಸಾಮಾಜಿಕ ಮಾಧ್ಯಮ ಸಂಪರ್ಕಗಳ ಪತ್ತೆಹಚ್ಚಲು ಆತನ ಮೊಬೈಲ್ ಪೋನ್ ಹಾಗೂ ಕಂಪ್ಯೂಟರ್ ಅನ್ನು ಅಧಿಕಾರಿಗಳು ಪರೀಶೀಲನೆ ನಡೆಸಿದರು. ಅಲ್ಲದೆ, ಆತನ ಇ-ಮೇಲ್, ಪಾಸ್ ಪೋರ್ಟ್, ವೀಸಾ ಹಾಗೂ ಆತನ ವಿದೇಶ ಪ್ರವಾಸಗಳ ಬಗ್ಗೆ ವಿಚಾರಣೆ ನಡೆಸಲಾಯಿತು. ನಾಳೆ ಆತ ದುಬೈಗೆ ತೆರಳಬೇಕಾಗಿದ್ದ ಎಂದು ಮೂಲಗಳು ಹೇಳಿವೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ನೆರೆಯ ತಂಜಾವೂರ್ ಜಿಲ್ಲೆಯಲ್ಲಿ ಷೇಕ್ ಅಲ್ಲಾವುದ್ದೀನ್ ಎಂಬ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿ ಆತನನ್ನು ವಿಚಾರಣೆಗೊಳಪಡಿಸಲಾಗಿತ್ತು.
ಸೆಪ್ಟಂಬರ್ 2018ರಲ್ಲಿ ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ನಾಯಕ ಅರ್ಜುನ್ ಸಂಪತ್ ಹಾಗೂ ಶಕ್ತಿ ಸೇನಾ ನಾಯಕ ಅನ್ಬು ಮಾರಿ ಅವರ ಹತ್ಯೆಗೆ ಇಸ್ಲಾಮಿಕ್ ಸ್ಟೇಟ್ ನಿಂದ ಪ್ರೇರಣೆ ಪಡೆದು ಸಂಚು ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಈ ದಾಳಿಗಳನ್ನು ನಡೆಸಿದೆ.
ಇದಕ್ಕೂ ಮುನ್ನ ರಾಷ್ಟ್ರೀಯ ತನಿಖಾ ಸಂಸ್ಥೆ ಕಳೆದ ಅಕ್ಟೋಬರ್ 31 ರಂದು ಕೊಯಮತ್ತೂರು, ಶಿವಗಂಗಾ, ನಾಗಪಟ್ಟಿಣಂ, ತೊತು ಕುಡಿ ಹಾಗೂ ತಿರುಚಿನಾಪಳ್ಳಿ ಯಲ್ಲಿರುವ ಶಂಕಿತರ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ಎರಡು ಲ್ಯಾಪ್ ಟಾಪ್ ಗಳು, ಎಂಟುಮೊಬೈಲ್ ಗಳು, ಐದು ಸಿಮ್ ಕಾರ್ಡ್ ಗಳು, ಒಂದು ಮೆಮೊರಿ ಕಾರ್ಡ್ ಹಾಗೂ 14 ದಾಖಲೆಗಳನ್ನು ವಶಪಡಿಸಿಕೊಂಡಿತ್ತು
ಕೊಯಮತ್ತೂರು ಪೊಲೀಸರು, ಸಂಚಿಗೆ ಸಂಬಂಧಿಸಿದಂತೆ ಟಿಂಡಿವನಂನ ಎಸ್. ಇಸ್ಮಾಯಿಲ್ ( 25), ಚೆನ್ನೈನ ಎಸ್. ಸಲಾವುದ್ದೀನ್ (25) ಐ. ಜಾಫರ್ ಸಾದಿಖ್ ಅಲಿ (29) ಹಾಗೂ ಷಂಸುದ್ದೀನ್(20), ಕೊಯಮತ್ತೂರಿನ ಆಶಿಕ್ (25), ಎಸ್. ಫೈಜಲ್ (26) ಹಾಗೂ ಶಾಮುಲ್ ಹಮೀದ್ ಅಕಾ ಅನ್ವರ್ (23) ಬಂಧಿಸಿದ್ದರು.
ರಾಷ್ಟ್ರೀಯ ತನಿಖಾ ಸಂಸ್ಥೆ 2018ರ ಅಕ್ಟೋಬರ್ ನಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಆರಂಭಿಸಿತ್ತುಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದ ಸ್ಪೋಟಗಳ ಸೂತ್ರದಾರ ಝಹರಾನ್ ಹಷ್ಮಿ ಅವರ ಭಾಷಣ ಹಾಗೂ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ವೀಕ್ಷಿಸಿ ಪ್ರೇರಣೆ ಹೊಂದಿ, ಇಸ್ಲಾಮಿಕ್ ಸ್ಟೇಟ್/ದಹೇಶ್ ತೀವ್ರವಾದಿ ಸಂಘಟನೆಯೊಂದಿಗೆ ಆರೋಪಿಗಳು ಸಂಬಂಧ ಹೊಂದಿದ್ದರು ಎಂದು ದೂರಲಾಗಿದೆ.