ನೀಟ್‌-ಯುಜಿ ಪ್ರಕರಣವು ಕೇವಲ ಹಗರಣವಲ್ಲ, ಘೋರ ಅಪರಾಧ: ಮಹಾಂತೇಶ್ ಬಿಳೂರ್

ಬೆಳಗಾವಿ 15: ಜೂನ್ 14ರಂದು ಪ್ರಕಟಗೊಳ್ಳಬೇಕಿದ್ದ ನೀಟ್ ಫಲಿತಾಂಶವು ಜೂನ್ 4ರಂದು ಪ್ರಕಟಗೊಂಡಿತು. ಚುನಾವಣೆಯ ಫಲಿತಾಂಶದ ಅಗಾಧತೆಯ ಮುಂದೆ ಇದು ಸುದ್ದಿಯಾಗಬಾರದೆಂಬ ಹುನ್ನಾರದಿಂದ ಈ ರೀತಿ ಮಾಡಲಾಯಿತು. ಏಕೆಂದರೆ, ನೀಟ್ ಪರೀಕ್ಷೆಯಲ್ಲಿ ಈ ಬಾರಿ 67 ಅಭ್ಯರ್ಥಿಗಳಿಗೆ 720ಕ್ಕೆ 720 ಅಂಕಗಳು ಬಂದಿವೆ. ಹರಿಯಾಣದ ಒಂದೇ ಪರೀಕ್ಷೆಯ ಕೇಂದ್ರದಲ್ಲಿ ಆರು ವಿದ್ಯಾರ್ಥಿಗಳಿಗೆ ಪೂರ್ಣ ಅಂಕಗಳು ಬಂದಿವೆ. ಬಿಹಾರದಲ್ಲಿ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆ ಕೇಳಿ ಬಂದರೂ ಸರಿಯಾದ ತನಿಖೆ ನಡೆದಿಲ್ಲ. ದ್ವಿತೀಯ ಪಿಯು ಪರೀಕ್ಷೆಯ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ಫೇಲಾದ ಗುಜರಾತಿನ ವಿದ್ಯಾರ್ಥಿನಿಗೆ ನೀಟ್ ಪರೀಕ್ಷೆಯಲ್ಲಿ 705 ಅಂಕಗಳು ಬಂದಿವೆ. ಇದು ಹೇಗೆ ಸಾಧ್ಯ? ಎಂದು ಎಐಡಿಎಸ್‌ಓ ರಾಜ್ಯ ಕಚೇರಿ ಕಾರ್ಯದರ್ಶಿ ಮತ್ತು ಬೆಳಗಾವಿ ಜಿಲ್ಲಾ ಸಂಚಾಲಕ ಮಹಾಂತೇಶ್ ಬಿಳೂರ್ ಪ್ರಶ್ನಿಸಿದರು. 

ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ನೀಟ್‌-ಯುಜಿ ಹಗರಣವನ್ನು  ಖಂಡಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಉದ್ದೇಶಿಸಿ  ಎಐಡಿಎಸ್‌ಓ ರಾಜ್ಯ ಕಚೇರಿ ಕಾರ್ಯದರ್ಶಿಗಳು ಹಾಗೂ  ಬೆಳಗಾವಿ ಜಿಲ್ಲಾ ಸಂಚಾಲಕರಾದ ಮಹಾಂತೇಶ್ ಬಿಳೂರ್ ಮಾತನಾಡಿದರು.  

ಈ ಬಾರಿ ದೇಶದಾದ್ಯಂತ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದಾರೆ. ನೀಟ್ ಹಗರಣವು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಎಐಡಿಎಸ್‌ಓ ದೇಶವ್ಯಾಪಿ ಹೋರಾಟ ನಡೆಸುತ್ತಿದೆ.  

ದೇಶದೆಲ್ಲೆಡೆ ಎನ್‌ಟಿಎ ವಿರುದ್ಧ ಆಕ್ರೋಶ ಭುಗಿಲೆದ್ದಿರುವಾಗ, ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಎನ್‌ಟಿಎ ಮುಖ್ಯಸ್ಥರೇ ಈ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವುದು ಹಾಸ್ಯಾಸ್ಪದವಾಗಿದೆ. ಕೃಪಾಂಕ ಪಡೆದ 1563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಲು ಎನ್ ಟಿ ಎ  ನಿರ್ಧರಿಸಿದೆ. ಕೆಲವು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಫಲಿತಾಂಶದ ದಿನದಿಂದಲೂ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿರುವ ಎನ್‌ಟಿಎ ಈಗ ವಿದ್ಯಾರ್ಥಿಗಳ ಮೇಲೆ ಗೂಬೆ ಕೂರಿಸಿ ತನ್ನನ್ನು ರಕ್ಷಿಸಿಕೊಳ್ಳುತ್ತಿದೆ. ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದ ಜಂಟಿ ಸಿಇಟಿ ಪರೀಕ್ಷೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಒಂದೇ ಸಮಾನ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಹೊರೆ ಕಡಿಮೆ ಮಾಡುವ ಹೆಸರಿನಲ್ಲಿ ನೀಟ್ ಪರೀಕ್ಷೆ ಆರಂಭಿಸಲಾಯಿತು. 2016ರಿಂದ ಇಲ್ಲಿಯವರೆಗೂ ವೈದ್ಯಕೀಯ ಶಿಕ್ಷಣ ಪಡೆಯುವವರಲ್ಲಿ ಬಡವರ, ರೈತರ, ಕಾರ್ಮಿಕರ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಏಕೆಂದರೆ, ಲಕ್ಷಾಂತರ ರೂಪಾಯಿ ಫೀಸ್ ಕೊಟ್ಟು ಕೋಚಿಂಗ್ ತೆಗೆದುಕೊಂಡರೆ ಮಾತ್ರ ನೀಟ್ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಗಳಿಸಲು ಸಾಧ್ಯ. ಶಿಕ್ಷಣದ ಕೇಂದ್ರೀಕರಣ ಮತ್ತು ವ್ಯಾಪಾರಿಕರಣದ ಉಪಕರಣವಾಗಿರುವ ನೀಟ್ ಪರೀಕ್ಷೆ ರದ್ದಾಗಬೇಕು.  ಕೂಡಲೇ ಈ ಪ್ರಕರಣದ ನ್ಯಾಯಾಂಗ ತನಿಖೆ ನಡೆದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿರುವವರಿಗೆ ಕಠಿಣ ಶಿಕ್ಷೆ ಆಗಬೇಕು ಹಾಗೂ ಶಿಕ್ಷಣ ತಜ್ಞರ ಸಮಿತಿ ರಚಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದರು. 

ಪ್ರತಿಭಟನೆಯ ಅಧ್ಯಕ್ಷತೆಯನ್ನು ಪೀರ್ ಸಾಬ್ ವಹಿಸಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ನೀಟ್ ಹಗರಣದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.