ನವದೆಹಲಿ, ಫೆ ೫, ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಆರೋಪಿಸಿರುವುದಕ್ಕೆ, ಅವರ ಪುತ್ರಿ ಹರ್ಷಿತಾ ಕೇಜ್ರಿವಾಲ್ ಬಿಜೆಪಿ ನಾಯಕರನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ನನ್ನ ತಂದೆ ಸದಾ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ. ... ನನ್ನ ತಂದೆ ನನಗೆ ಹಾಗೂ ನನ್ನ ಸಹೋದರನಿಗೆ ಬೆಳಗಿನ ಜಾವ ಎಬ್ಬಿಸಿ ಭಗವದ್ಗೀತೆಯನ್ನು ಓದಿ ಅದರ ಅರ್ಥವನ್ನು ವಿವರಿಸುತ್ತಾರೆ.
ಈಗೆ ... ಭಗವದ್ಗೀತೆ ಕಲಿಸಿದ ನನ್ನ ತಂದೆ ಭಯೋತ್ಪಾದಕನಾ? ಎಂದು ಹರ್ಷಿತಾ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ನನ್ನ ತಂದೆ ಬಡ ಜನರಿಗೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸುತ್ತಿದ್ದಾರೆ. ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದು, ವಿದ್ಯುತ್, ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿರುವ ನನ್ನ ಅಪ್ಪ ಉಗ್ರರಾಗಿದ್ದಾರೆಯೇ? ಎಂದು ಹರ್ಷಿತಾ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ. ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುವುದು ಕೂಡಾ ಭಯೋತ್ಪಾದನೆಯೇ ಎಂದು ಹರ್ಷಿತಾ ಕೇಜ್ರಿವಾಲ್ ಕೇಳಿದ್ದಾರೆ. ಕೇಜ್ರಿವಾಲ್ ಭಯೋತ್ಪಾದಕ ಎಂದು ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಚುನಾವಣಾ ಪ್ರಚಾರದ ವೇಳೆ ಆರೋಪಿಸಿದ್ದರು.