ಭಕ್ತರ ಸಹಕಾರದಿಂದ ಮಠಗಳು ಬೆಳೆಯಲು ಸಾಧ್ಯ: ಶ್ರೀಗಳು

Mutts can grow with the cooperation of devotees: Seer

ರಾಯಬಾಗ 13: ಭಕ್ತರ ಸಹಾಯ ಸಹಕಾರದಿಂದ ಮಠಗಳು ಬೆಳೆಯಲು ಸಾಧ್ಯ ಎಂದು ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದರು.  

ತಾಲೂಕಿನ ಭೆಂಡವಾಡ ಗ್ರಾಮದ (ಗುಡ್ಡದ) ರೇವಣಸಿದ್ಧೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಧಾರ್ಮಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಮನೆ-ಮನಗಳಲ್ಲಿ ಭಕ್ತಿಯನ್ನು ಹೊಂದಬೇಕೆಂದರು.  

ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭು ಮಹಾರಾಜರು ಮಾತನಾಡಿ, ರೇವಣಸಿದ್ಧೇಶ್ವರ ನಡೆದಾಡಿದ ಭೂಮಿ ಪೂಣ್ಯ ಭೂಮಿಯಾಗಿ ಅಭಿವೃದ್ಧಿ ಹೊಂದಿದೆ. ಮನುಷ್ಯನ ದೇಹ ಮತ್ತು ಆತ್ಮಕ್ಕೆ ಕೊಂಡಿ ಆಗಿರುವ ಮನಸ್ಸನ್ನು ಗೆಲ್ಲಲು ಶಿವಧ್ಯಾನ ಮಾಡಬೇಕೆಂದರು.  

ಭೆಂಡವಾಡ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಘಟಪ್ರಭಾ ಹೊಸಮಠದ ವಿರುಪಾಕ್ಷ ಸ್ವಾಮೀಜಿ, ಮಾರುತಿ ಶರಣರು, ಹಿರಿಯ ಧುರೀಣ ಅನೀಲ ದಳವಾಯಿ, ವಕೀಲರಾದ ವಿ.ಎಸ್‌.ಪೂಜೇರಿ, ರೇವಣು ಶಿವಾಪೂರೆ, ಸುರೇಶ ಚೌಗುಲೆ, ಮಹಾದೇವ ಲಕ್ಷ್ಮೇಶ್ವರ, ರೇವಣು ದುಪದಾಳೆ, ಸಿದ್ದು ಪಾತ್ರೋಟ, ಸಂಜು ಹಂಜಿ, ಸಂಗಪ್ಪ ಬೆನ್ನಾಳೆ, ಸಿದ್ದಗೌಡ ಕಬಾಡಗಿ ಸೇರಿ ಅನೇಕ ಭಕ್ತಾದಿಗಳು ಇದ್ದರು.  

ರವಿ ಪೂಜೇರಿ ಸ್ವಾಗತಿಸಿ, ನಿರೂಪಿಸಿದರು.