ಬೆಂಗಳೂರು, ಮೇ 15, ಕ್ಯಾನ್ಸರ್ ನಿಂದ ಬಳಲುತ್ತಿದ್ದ ಭೂಗತ ಲೋಕದ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಶುಕ್ರವಾರ ಬೆಳಗ್ಗೆ ಕೊನೆ ಉಸಿರೆಳೆದಿದ್ದಾರೆ.
ಎಂಎರ್ ಆರ್ ಗ್ರೂಪ್ ನ ಮಾಲೀಕರಾದ್ದ ಮುತ್ತಪ್ಪ ರೈ (68)ಅವರು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಇಂದು ಮಧ್ಯಾಹ್ನ ಅವರ ಸ್ವಗೃಹ ಬಿಡದಿಯಲ್ಲಿ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದ್ದು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಟುಂಬದ ಕೆಲವೇ ಮಂದಿಗಷ್ಟೆ ಅಂತಿಮ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಬಿಡದಿ ನಿವಾಸದಲ್ಲಿ ಅಂತ್ಯಕ್ರಿಯೆ ನಡೆಯುವ ಹಿನ್ನಲೆಯಲ್ಲಿ ಮುತ್ತಪ್ಪ ರೈ ಮನೆಯಿಂದ 2 ಕಿ.ಮೀ ದೂರದಲ್ಲೇ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದಾರೆ. ಅಲ್ಲದೇ, ಅವರ ನಿವಾಸಕ್ಕೆ ತೆರಳುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ, ಬಿಡದಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಬಿಡದಿ ನಿವಾಸಕ್ಕೆ ಮೃತ ದೇಹ ಬರುವ ಸಾಧ್ಯತೆ ಇದ್ದು, ತೆರೆದ ವಾಹನದಲ್ಲಿ 12 ಗಂಟೆಗೆ ಮಣಿಪಾಲ್ ಆಸ್ಪತ್ರೆಯಿಂದ ಮೃತದೇಹ ರವಾನಿಸಲಾಗುವುದು ಎಂದು ತಿಳಿದು ಬಂದಿದೆ.ಅಂತಿಮ ವಿಧಿವಿಧಾನ ಕಾರ್ಯದಲ್ಲಿ ಭಾಗಿಯಾಗಲೂ ಕೇವಲ ಕುಟುಂಬದ 25 ಜನರಿಗಷ್ಟೇ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಆದರೆ, ಮಾಧ್ಯಮಗಳ ಚಿತ್ರೀಕರಣಕ್ಕೆ ನಿರ್ಬಂಧಿಸಲಾಗಿದ್ದು, ಮಾಧ್ಯಮ ಮಿತ್ರರು ಸಹಕರಿಸಬೇಕು ಎಂದು ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಅವರು ಮನವಿ ಮಾಡಿದ್ದಾರೆ.ಸಂಜೆ 4 ಗಂಟೆಗೆ ಮುತ್ತಪ್ಪ ರೈ ಅವರ ಅಂತಿಮ ವಿಧಿವಿಧಾನ ಜರುಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮುತ್ತಪ್ಪ ರೈ ಅವರು ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ದಿ. ಎನ್ ನಾರಾಯಣ ರೈ, ಸುಶೀಲ ರೈ ಅವರ ಸುಪುತ್ರ. ಮೃತ ಮುತ್ತಪ್ಪ ಅವರಿಗೆ ರಿಕ್ಕಿ ಹಾಗೂ ರಾಕಿ ಎಂಬ ಇಬ್ಬರು ಮಕ್ಕಳಿದ್ದಾರೆ. 2013 ರಲ್ಲಿ ಅವರ ಪತ್ನಿ ರೇಖಾ ರೈ ಕ್ಯಾನ್ಸರ್ ರೋಗದಿಂದ ಮೃತಪಟ್ಟಿದ್ದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಡಾವು ಮೂಲದ ಮುತ್ತಪ್ಪನವರು ಸದ್ಯ ಬೆಂಗಳೂರಿನ ಬಿಡದಿ ಬಳಿ ವಾಸವಾಗಿದ್ದರು. ಕಳೆದ ಎಂಟು ತಿಂಗಳಿನಿಂದ ಅವರು ಮಾರಣಾಂತಿಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.ಭೂಗತ ಲೋಕದಿಂದ ವಿರಮಿಸಿ, ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಜಯ ಕರ್ನಾಟಕ ಎಂಬ ರಾಜಕೀಯ ತೇರ ಸಾಮಾಜಿಕ ಸಂಘಟನೆ ಸ್ಥಾಪಿಸಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲ ಕಾಲ ವಿಜಯ ಬ್ಯಾಂಕ್ ಉದ್ಯೋಗಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ಬೆಂಗಳೂರಿನಲ್ಲಿ ಸ್ನೇಹಿತರೊಬ್ಬರ ಉದ್ಯಮ ನಡೆಸುತ್ತಿದ್ದರು.2010ರಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ, ಹಾಗೂ 2019ರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅತಿ ಎತ್ತರದ ಬ್ರಹ್ಮರಥ ಸಮರ್ಪಣೆ ಮಾಡಿದ್ದ ರೈ ಅವರು ಕಳೆದ ಎರಡು ದಶಕಗಳಿಗಿಂತಲೂ ಅಧಿಕ ಕಾಲದಿಂದ ಪುತ್ತೂರಿನ ಐತಿಹಾಸಿಕ ಕೋಟಿ ಚೆನ್ನಯ ಕಂಬಳದ ಸಾರಥ್ಯ ವಹಿಸಿದ್ದರು.ಮುತ್ತಪ್ಪ ರೈ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.