ಸಂಗೀತ ಆರೋಗ್ಯಕ್ಕೆ ದಿವ್ಯ ಓಷಧಿ : ಹೆಗ್ಗಳಗಿ
ಮುಧೋಳ 3 : ಸಂಗೀತ ಕೇಳುವುದರಿಂದ ಮನಸ್ಸಿನ ಸಂತೋಷ ಹೆಚ್ಚುತ್ತದೆ ಆರೋಗ್ಯವು ಸುಧಾರಿಸುತ್ತದೆ ಆತ್ಮ ಶಕ್ತಿಯು ಬೆಳೆಯುತ್ತದೆ ಸಂಗೀತ ಆರೋಗ್ಯ ವೃದ್ಧಿಗೆ ದಿವ್ಯ ಓಷಧಿಯಾಗಿದೆ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ಹೇಳಿದರು.
ನಗರದ ಗುರು ಸಂಗೀತ ಪಾಠಶಾಲೆ ಹಾಗೂ ಸಪ್ತಸ್ವರ ಸಂಗೀತ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆ ಇವರ ಸಹಯೋಗದಲ್ಲಿ ಭಾನುವಾರ ಸಂಜೆ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡಿರುವ ಎರಡು ತಿಂಗಳ ಅವಧಿಯ ಬೇಸಿಗೆ ಸಂಗೀತ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ವೈದ್ಯಕೀಯ ವಿಜ್ಞಾನದಲ್ಲಿ ಸಂಗೀತವನ್ನು ಉಪಚಾರದ ವಿಧಾನವಾಗಿ ಬಳಸಲಾಗುತ್ತದೆ ಮಕ್ಕಳಿಗೆ ಬಾಲ್ಯದಲ್ಲಿ ಸಂಗೀತ ಕಲಿಸುವುದು ಬಹಳ ಅವಶ್ಯ ಬೌದ್ಧಿಕ ಶಕ್ತಿ ಮತ್ತು ವಿಷಯ ಗ್ರಹಿಸುವ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಂ.ಜಿ ದಾಸರ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ಸಂಗೀತ ಹಾಡುವದರಿಂದ ಮತ್ತು ಕೇಳುವದರಿಂದ ಏನೇನು ಪ್ರಯೋಜನೆಗಳು ಇವೆ ಎಂಬುದರ ಕುರಿತು ಸ್ವವಿವರವಾಗಿ ತಿಳಿಸಿಕೊಟ್ಟರು. ಇನ್ನೊರ್ವ ಅತಿಥಿಯಾಗಿದ್ದ ಪತ್ರಕರ್ತ ವಿಶ್ವನಾಥ ಮುನವಳ್ಳಿ ಮಾತನಾಡಿ ಸುದ್ದಿ ಮತ್ತು ಪ್ರಚಾರ ಇವುಗಳ ನಡುವಿನ ತಿಳಿಸಿ ಯಾವುದು ಸುದ್ದಿಯಾಗುತ್ತೆ ಯಾವುದು ಸುದ್ದಿ ಯಾಗುವದಿಲ್ಲ ಎನ್ನುವದನ್ನು ಉದಾಹರಣೆ ಸಮೇತ ತಿಳಿಸಿಕೊಟ್ಟರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಸಂಗೀತದ ಮಹತ್ವ ಎಂತಹದು ಎಂಬುದನ್ನು ಹೇಳಿಕೊಟ್ಟರು.
ಸಪ್ತಸ್ವರ ಸಂಗೀತ ನೃತ್ಯ ಹಾಗೂ ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಉಬಯ ಸಂಸ್ಥೆಗಳಿಂದ ಹಮ್ಮಿಕೊಂಡಿರುವ ಎರಡು ತಿಂಗಳ ಬೇಸಿಗೆ ಶಿಬಿರದಲ್ಲಿ ವಚನಗಳು ಶರೀಪರ ತತ್ವಪದಗಳು ಭಾವಗೀತೆಗಳು ಜಾನಪದ ಹಾಡುಗಳು ಪುಟ್ಟರಾಜ ಗವಾಯಿಗಳವರ ಸ್ವಾಮಿ ವಿವೇಕಾನಂದರ ಹಾಗೂ ಶಾರದಾ ಮಾತೆಯವರ ಭಕ್ತಿ ಗೀತೆಗಳನ್ನು ಈ ಸಂಗೀತ ತರಬೇತಿ ಕಾರ್ಯಕ್ರಮದಲ್ಲಿ ಕಲಾವಿದರಾದ ಗಂಗಾಧರ ಗಾಣಿಗೇರ ಹಾಗೂ ತಂಡದವರು ಕಲಿಯಿಸಿ ಕೊಡುತ್ತಾರೆ ಕಾರಣ ತರಬೇತಿ ಪಡೆಯುತ್ತಿರುವ ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು. ಸಪ್ತಸ್ವರ ಸಂಗೀತ ನೃತ್ಯ ಹಾಗೂ ಸಂಸ್ಕೃತಿ ಸಂಸ್ಥೆಯ ಉಪಾಧ್ಯಕ್ಷೆ ಭಾರತಿ ಕತ್ತಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಂದನಾ ಕುಲಕರ್ಣಿ ಸ್ವಾಗತಿಸಿದರು ಸುವರ್ಣ ಸುಕ್ಮೆ ಮತ್ತು ಪಲ್ಲವಿ ದೇಸಾಯಿ ಪ್ರಾರ್ಥನೆ ಹೇಳಿದರು ರೇಣುಕಾ (ರಶ್ಮಿ) ಗಿರಡ್ಡಿ ನಿರೂಪಿಸಿದರು ಸಂಗೀತ ಶಿಕ್ಷಕ ಗಂಗಾಧರ ಗಾಣಿಗೇರ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಮಕ್ಕಳಿಂದ ಹಾಗೂ ಗಂಗಾಧರ ಗಾಣಿಗೇರ ಸಂಗೀತ ಗೋಷ್ಠಿ ನಡೆಯಿತು.