ಸಂಗೀತ ವಿದ್ವಾಂಸ : ಶೀರೀಷ ಜೋಶಿ

ಸಂಗೀತಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಬರೆಯುವ ಕೆಲವೇ ಲೇಖಕರಲ್ಲಿ ಶೀರೀಷ ಜೋಶಿಯವರು ಒಬ್ಬರು. ಅವರು ಸಂಗೀತ ಬಲ್ಲವರು ಮತ್ತು ಸೂಕ್ಷ್ಮ ಸಂವೇದಿಗಳು. ಜೋಶಿಯವರು ಸಂಗೀತ ಮತ್ತು ಸಾಹಿತ್ಯದಲ್ಲಿ ಒಲವು ಇಟ್ಟುಕೊಂಡಿರುವ ಕಾರಣದಿಂದಲೇ ಹಲವು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತಲೋಕಕ್ಕೆ ಸಮರ​‍್ಿಸಿದ್ದಾರೆ. ಅವರಿಗೆ ಯಾವಾಗಲೂ ಸಂಗೀತ, ನಾಟಕ ಸಾಹಿತ್ಯದ್ದೇ ಗುಂಗು. ಅವರು ಸಂಗೀತ ದಿಗ್ಗಜರ ಬಗೆಗೆ ನಾಟಕ ರಚಿಸಿ, ರಂಗಪ್ರಯೋಗದ ಮೂಲಕ ಯಶಸ್ವಿಯಾದವರು. 

ಶೀರೀಷ ಜೋಶಿಯವರು ಬೆಳಗಾವಿ-ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಚ್ಛಾಪುರದಲ್ಲಿ 1963ರ ಜೂನ್ 20ರಂದು ಜನಿಸಿದರು.  ಮೂಲತಃ ಅವರು ಗೋಕಾದವರು. ತಂದೆ ಬಾಲಕೃಷ್ಣ, ತಾಯಿ ಭಾರತಿಬಾಯಿ. ತಂದೆ ಜಲಸಂಪನ್ಮೂಲ ಇಲಾಖೆಯ ಉದ್ಯೋಗಿ. ಅವರು ಪ್ರಾಥಮಿಕ ಶಿಕ್ಷಣವನ್ನು ಪಾಚ್ಛಾಪುರ ಮತ್ತು ಹಿಡಕಲ್ ಡ್ಯಾಂನಲ್ಲಿ ಮುಗಿಸಿದರು. ಶೀರೀಷರವರು ಮಾಧ್ಯಮಿಕ ಶಿಕ್ಷಣವನ್ನು ಫತ್ತೆಖಾನ ದೇಸಾಯಿ ಮಾಧ್ಯಮಿಕ ಶಾಲೆಯಲ್ಲಿ ಮತ್ತು ರಾಮದುರ್ಗದ ಸ್ಟೇಟ್ ಜ್ಯೂನಿಯರ್ ಕಾಲೇಜಿನಲ್ಲಿ ಪೂರೈಸಿದರು. ನಂತರ ಬಿ.ಎ. ಪದವಿಯನ್ನು ಎರಡು ವರ್ಷಗಳವರೆಗೆ ರಾಮದುರ್ಗದ ಬೆಂಬಳಗಿ ಕಾಲೇಜಿನಲ್ಲಿ ಪೂರೈಸಿ, ನಂತರ ಬೆಳಗಾವಿಯ ಆರ್‌.ಪಿ.ಡಿ. ಕಾಲೇಜಿನಲ್ಲಿ ಬಿ.ಎ. ಅಂತಿಮ ವರ್ಷವನ್ನು ಮುಗಿಸಿದರು. ನಂತರ ಅವರು ಬಾಹ್ಯ ವಿದ್ಯಾರ್ಥಿಯಾಗಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.  

ಶೀರೀಷ ಜೋಶಿಯವರು ಸೋದರತ್ತೆ ಸುಭದ್ರಾ ಅವರ ಮನೆಯಲ್ಲಿದ್ದುಕೊಂಡೇ ಪಾಚ್ಛಾಪುರದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಅವರ ಸೋದರತ್ತೆ ಪ್ರಾಥಮಿಕ ಶಾಲಾ ಶಿಕ್ಷಕಿ ಹಾಗೂ ಲೇಖಕಿಯಾಗಿದ್ದರು. ಹೀಗಾಗಿ ಶೀರೀಷ ಅವರ ಬರವಣಿಗೆಗೆ ಸೋದರತ್ತೆಯವರೇ ಸ್ಫೂರ್ತಿಯಾಗಿದ್ದಾರೆ. ಏಳನೆಯ ತರಗತಿಯಲ್ಲಿದ್ದಾಗಲೇ ಬಡಿಗೇರ ಗುರುಗಳ ಪ್ರೋತ್ಸಾಹದಿಂದ ನಾಟಕವನ್ನು ರಚಿಸಿದ್ದರು. ಕಾಲೇಜಿನಲ್ಲಿದ್ದಾಗಲೇ ಅವರು ಕವನಗಳನ್ನು ರಚಿಸಿ ಗುರುಗಳಿಂದ ಮೆಚ್ಚುಗೆ ಪಡೆದಿದ್ದರು. ಕಾಲೇಜಿನಲ್ಲಿ ಆರ್‌.ವಿ.ಪಾವಟೆ, ಪಿ.ಎಂ.ಕಣವಿ, ಎಸ್‌.ಜಿ.ಚಿಕ್ಕನರಗುಂದ, ಎ.ಎ.ಸನದಿ, ಸಿ.ಎಸ್‌.ಹಿರೇಮಠ, ಕೆ.ಆರ್‌.ಮಡಿ ಮುಂತಾದವರು ಸಾಹಿತ್ಯದಲ್ಲಿ ಆಸಕ್ತಿ ಮೂಡಲು ಕಾರಣರಾಗಿದ್ದರು. ಅವರ ತಂದೆಯವರು ಬಿ.ಎ. ಎರಡನೇ ವರ್ಷ ಓದುತ್ತಿರುವಾಗಲೇ ತೀರಿಕೊಂಡರು. ಹೀಗಾಗಿ ಗುರುನಾಥ ಗೋಡಖಿಂಡಿ ಅವರ ಮನೆಯಲ್ಲಿದ್ದುಕೊಂಡು, ಟ್ಯೂಶನ್ ಹೇಳಿ ಬಿ.ಎ. ಎರಡನೆಯ ವರ್ಷ ಪೂರ್ಣಗೊಳಿಸಿದರು. ರಾಮದುರ್ಗದಲ್ಲಿದ್ದಾಲೇ ಕೃಷ್ಣಾಜಿ ಫಡ್ನೀಸ್ ಸಂಗೀತ ಗುರುಗಳಲ್ಲಿ ಎರಡು ವರ್ಷ ಸಂಗೀತವನ್ನು ಕಲಿತರು. ಬೆಳಗಾವಿಯ ಆರ್‌.ಪಿ.ಡಿ. ಕಾಲೇಜಿನಲ್ಲಿ ಬಿ.ಎ. ಅಂತಿಮ ವರ್ಷ ಓದುತ್ತಿರುವಾಗಲೇ ಅವರಿಗೆ ಅನುಕಂಪದ ಆಧಾರದ ಮೇಲೆ ನೀರಾವರಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ನೌಕರಿ ದೊರಕಿತು. ಅವರು ಮುನವಳ್ಳಿಯಲ್ಲಿ ಲಲಿತಾ ಬೆಟಗೇರಿ ಸಂಗೀತ ಶಿಕ್ಷಕಿಯರಲ್ಲಿ ಕಲಿಕೆಯನ್ನು ಮುಂದುವರೆಸಿದರು. ನಂತರ ಅವರು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾಗಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಕಗೊಂಡರು. ಕಳೆದ ನಾಲ್ವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು ಸಧ್ಯ ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ವೃತ್ತ ಕಛೇರಿಯಲ್ಲಿ ನಿಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

ಸಂಗೀತಗಾರರ ಬದುಕಿನ ರಸಮಯ ಸಂಗತಿಗಳನ್ನು ಅತ್ಯಂತ ಹೃದಯಂಗಮವಾಗಿ ಚಿತ್ರಿಸುವ ಕಲೆ ಶೀರೀಷ ಜೋಶಿ ಅವರಲ್ಲಿ ಕರಗತವಾಗಿದೆ. ಅವರು ಸಂಗೀತ, ನಾಟಕ, ಕಾದಂಬರಿ ಕಾವ್ಯ, ಜೀವನ ಚರಿತ್ರೆ, ಸಂಪಾದನೆ ಹೀಗೆ 38ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ​‍್ಿಸಿದ್ದಾರೆ. ಶ್ರೀ ರಾಘವೇಂದ್ರ ಸ್ತುತಿ ಕಾವ್ಯ, ಎಂಥಾ ಮೋಜಿನ ಕುದರಿ, ಯಶೋಗಾಥೆ, ಸೂರ್ಯದರ್ಶನ, ಗುಜರಿ ತೋಡಿ ಕಾದಂಬರಿಗಳು, ಮಿಂಚು, ಬೆಸುಗೆಗೊಳ್ಳದ ಹಳಿಗಳು, ಹಾರಿ ಹೋಗುವ ಹಂಸ ಏಕಾಂಗಿ, ಎಲ್ಲಾರೂ ಮಾಡುವದು ಹೊಟ್ಟೆಗಾಗಿ, ಗತಿ, ಕವಿಗಳು ಸಾರ್ ಕವಿಗಳು, ಮೀ ಟೂ, ಪ್ರಿಂಟಿಂಗ್ ಮಶೀನ್ ನಾಟಕಗಳು, ಕುಮಾರ ಗಂಧರ್ವ, ಸ್ವರಯಾನ, ಕರ್ನಾಟಕದ ಗಂಧರ್ವರು ಚಂದ್ರಮ್ಮ ತಾಯಿಗಳು, ಪಂ. ಬಸವರಾಜ ರಾಜಗುರು, ಪ್ರೊ. ಸದಾನಂದ ಕನವಳ್ಳಿ, ಕಂಬಿ ಬಸವಾರ್ಯರು ಜೀವನ ಚರಿತ್ರೆಗಳು, ಬೆಳಗಾವಿಯ ಬೆಳಗು, ನಲ್ವಾಡಗಳು, ಉತ್ತರ ಕರ್ನಾಟಕದ ರಂಗ ಸಂಗೀತ ವೈಭವ ಸಂಪಾದನೆ, ಕಲ್ಪನಾ ಸಂಗೀತ, ನನ್ನ ಸಂಗೀತ ವ್ಯಾಸಾಂಗ ಅನುವಾದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. 

ಭಾರತರತ್ನ ಭೀಮಣ್ಣ ಕೃತಿಯು ಸಂವೇದನಾಶೀಲ ಬರವಣಿಗೆಯಿಂದ ಕೂಡಿದ್ದು, ಭೀಮಣ್ಣನವರ ವ್ಯಕ್ತಿತ್ವವನ್ನು ಅವರ ಗಾಯನದಷ್ಟೇ ಘನವಾಗಿ ತೆರೆದುಕೊಡುವ ಕೃತಿಯಾಗಿದೆ. ಶೀರೀಷ್ ಜೋಶಿಯವರ ಅಧ್ಯಯನ, ಸಂಶೋಧನೆ ಮತ್ತು ಸೂಕ್ಷ್ಮವಾದ ಸಂವೇದನೆಗೆ ಹಿಡಿದ ಕೈಗನ್ನಡಿಯಂತಿರುವ ಈ ಕೃತಿ ಇಂದಿನ ಯುವ ಪೀಳಿಗೆಗೆ ಮಹತ್ವದ ಕೃತಿಯಾಗಿದೆ. ಬೈಜೂನ ಸಂಗೀತ ಯಾತ್ರೆ, ಬಾಲ್ಯದ ಕಡುಕಷ್ಟದ ದಿನಗಳು, ಸಂಗೀತ ಸಾಧನೆ, ಬೈಜೂನ ಬದುಕಿನಲ್ಲಿ ಬಂದ ಕಷ್ಟ ಕೋಟಲೆಗಳನ್ನು ‘ಗುಜರಿ ತೋಡಿ’ ಕಾದಂಬರಿ ಓದುಗರ ಮುಂದೆ ಹರವಿಕೊಳ್ಳುತ್ತ ಹೋಗುತ್ತದೆ. ಇಡೀ ಕಾದಂಬರಿ ಬೈಜೂನ ಬಾಲ್ಯದಿಂದ ಹಿಡಿದು ಆತ ಸಂಗೀತ ಸಾಮ್ರಾಟನಾಗಿ ಮೃಗನಯನಿಯ ಮೇಲೆ ವಾತ್ಸಲ್ಯದ ಮಳೆಗೆರೆದ ಹಿರಿಯನಾಗಿ ಅಷ್ಟೇ ಅಲ್ಲ ಸ್ವತಃ ಹುಚ್ಚನಾಗಿ ಗುಜರಿತೋಡಿ ರಾಗದ ಜನಕರಾಗಿ ಹೀಗೆ ಹಲವು ನಾಟಕೀಯ ಸಂಗತಿಗಳನ್ನು ಕಾದಂಬರಿ ಹೃದ್ಯವಾಗಿ ಚಿತ್ರಿಸುತ್ತದೆ. ಕರ್ನಾಟಕದ ಗಂಧರ್ವರು, ಕುಮಾರ ಗಂಧರ್ವ, ಸಂಗೀತ ಲೋಕದ ರಸನಿಮಿಷಗಳು ಮೊದಲಾದ  ಕೃತಿಗಳ ಮೂಲಕ ಸಂಗೀತ ಸಾಹಿತ್ಯವನ್ನು ಸೃಷ್ಟಿಸಿ ವಿದ್ವತ್‌ಲೋಕದ ಗಮನ ಸೆಳೆದಿದ್ದಾರೆ. ಅವರ ಸೂರ್ಯದರ್ಶನ ಕಾದಂಬರಿಯು ಸೂರ​‍್ಪ ಎಂಬ ಸಂಗೀತಗಾರನಲ್ಲಿರುವ ನಾದ ಸ್ವರಗಳ  ಉದಯ ಮತ್ತು ವಿಕಾಸದ ಕಥೆ ಹೇಳುತ್ತದೆ. ನಾದವೇ ತಾನಾಗಿರುವದರಿಂದ ಸಂಗೀತ ಲಹರಿಯ ಪರಿಭಾಷೆಯಿಂದ ಸೂರ​‍್ಪನ ನಾದಯಾತ್ರೆಯ ರಾಗ, ಶೋಧನ ಗುರಿ-ಗಮ್ಯಗಳನ್ನು ಅವರು ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ. ಪ್ರಜಾವಾಣಿಯ ಅಂಕಣ ರೂಪದಲ್ಲಿ ಬಂದ ನಾದಲೋಕದ ರಸನಿಮಿಷಗಳು ಕೃತಿ ಮಾನವೀಯ ಅಪೂರ್ವ ಚಿತ್ರಣಗಳಿಂದ ಕೃತಿ ಮುಖ್ಯವೆನಿಸುತ್ತದೆ. ಸಂಗೀತ ಮತ್ತು ಮಾನವೀಯ ಸಂಬಂಧ ಹಾಗೂ ಬದುಕಿನ ಮೌಲ್ಯಗಳನ್ನು ಕುಮಾರ ಗಂಧರ್ವರ ಘನವ್ಯಕ್ತಿತ್ವದ ಮೂಲಕ ಶೋಧಿಸುವ, ಅನ್ವೇಷಿಸುವ ಪ್ರಾಮಾಣಿಕ ಪ್ರಯತ್ನವನ್ನು ಹಾರಿ ಹೋಗುವ ಹಂಸ ಎಕಾಂಗಿ ನಾಟಕದಲ್ಲಿ ಕಾಣಬಹುದು. ಶೀರೀಷ ಜೋಶಿವಯರು ಮರಾಠಿ ಸಂಗೀತ ಲೋಕದ ಅಪರೂಪದ ಗ್ರಂಥವನ್ನು ಅನುವಾದಿಸಿ ಹೊರತಂದಿದ್ದಾರೆ. 

ಶೀರೀಷ ಜೋಶಿಯವರು ನಾಟಕಗಳನ್ನು ರಚಿಸಿ, ಅಭಿನಯಿಸಿ, ಹಲವು ನಾಟಕಗಳ ನಿರ್ದೇಶನಗಳನ್ನು ಕೂಡ ಮಾಡಿದ್ದಾರೆ. ಅವರು ಗರ್ಭಗುಡಿ, ಬೀಳ್ಕೋಡುಗೆ, ದಿಂಡಿ, ಮೃಗಜಲ, ನಾ ಸತ್ತಿಲ್ಲ, ಕಪ್ಪು ಬಿಳುಪು ಮುಂತಾದ 20 ನಾಟಕಗಳಲ್ಲಿ ಅಭಿನಯಿಸಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹುಡುಕಾಟ, ವೇಷಾಂತರ ಪ್ರಸಂಗ, ಅಜ್ಜಿಕಥೆ, ದಾರಿಯಾವುದಯ್ಯಾ ವೈಕುಂಠಕೆ, ಇಪ್ಪತ್ತೊಂದರ ಶತಮಾನ, ಗತಿ, ಕವಿಗಳು ಸಾರ್ ಕವಿಗಳು ಮುಂತಾದ ನಾಟಕಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಜೋಶಿಯವರು ಇಂಗಳೆ ಮಾರ್ಗ, ಜುಲೈ 22, 1947 ಮತ್ತು ಸಾವಿತ್ರಿಬಾಯಿ ಫುಲೆ ಸಿನೇಮಾಗಳ ಸಂಭಾಷಣೆಗಳನ್ನು ಕೂಡ ಮಾಡಿರುವದು ವಿಶೇಷವಾದುದು. ಅವರು ಆಕಾಶವಾಣಿ ಧಾರವಾಡ ಕೇಂದ್ರದಿಂದ ಸಂಗೀತ ವಿಷಯಗಳ ಕುರಿತು ಉಪನ್ಯಾಸಗಳನ್ನು ನೀಡಿದ್ದಲ್ಲದೇ ಚಿಂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ಶೀರೀಷ ಜೋಶಿಯವರ ಸಂಗೀತ ಸಾಹಿತ್ಯ ಮತ್ತು ರಂಗಸೇವೆಯನ್ನು ಗುರುತಿಸಿ ನಾಡಿನ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಎಚ್‌.ಅರ್‌.ಭಸ್ಮೆ ಸಾಹಿತ್ಯ ಪ್ರಶಸ್ತಿ, ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಕನ್ನಡ ಜ್ಯೋತಿ ಸದ್ಭಾವನಾ ಪ್ರಶಸ್ತಿ, ಸುವರ್ಣಕರ್ನಾಟಕ ಗೌರವ ಪುರಸ್ಕಾರ, ಆಜೂರ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಡಾ.ಹಾ.ಮ.ನಾ ಪ್ರಶಸ್ತಿ, ಪಡನಾಡ ಪ್ರತಿಷ್ಠಾನ ಪ್ರಶಸ್ತಿ, ರಂಗ ಸಮ್ಮಾನ, ಚಲನಚಿತ್ರ ಅಕಾಡೆಮಿಯಿಂದ ಅತ್ಯುತ್ತಮ ಸಂಭಾಷಣೆಗಾರ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಅವರನ್ನರಿಸಿಕೊಂಡು ಬಂದಿವೆೆ. ಅವರು ಬೆಳಗಾವಿಯ ಲೋಕೋಪಯೋಗಿ ಇಲಾಖೆಯಲ್ಲಿ ನಿಬಂಧಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವದರೊಂದಿಗೆ, ಕಳೆದ ಮೂರು ದಶಕಗಳಿಂದಲೂ ಸಂಗೀತ, ನಾಟಕ ಮತ್ತು ಸಾಹಿತ್ಯ ನಂಟಿನೊಂದಿಗೆ ಬದುಕನ್ನು ಮುನ್ನಡೆಸುತ್ತಿದ್ದಾರೆ. ಅವರ ಸೇವೆ ಕನ್ನಡ ಸಾರಸ್ವತ ಲೋಕಕ್ಕೆ ನಿರಂತರವಾಗಿ ಮುಂದುವರೆಯಲಿ. ಸಂಪರ್ಕಿಸಿ: 9481937797 

- * * * -