ಜಾತ್ರಾ ಜೋಶ್ನಲ್ಲಿ ಮುಂಡಗೋಡ ಗಿಜಿಗುಡಿದ ರಸ್ತೆ: ರಾತ್ರಿವರೆಗೂ ಜನಸಾಗರ

ಜಾತ್ರಾ ಜೋಶ್ನಲ್ಲಿ ಮುಂಡಗೋಡ ಗಿಜಿಗುಡಿದ ರಸ್ತೆ: ರಾತ್ರಿವರೆಗೂ ಜನಸಾಗರ  Mundagoda road was jammed with people during the festival: Crowds continued till night

ಮುಂಡಗೋಡ 06: ಜಾತ್ರಾ ಮಹೋತ್ಸವದ ಮೂರನೇ ದಿನ ಮುಂಡಗೋಡ ಪಟ್ಟಣಕ್ಕೆ ದಾಖಲೆ ಮಟ್ಟದ ಜನಸಾಗರ ಹರಿದುಬಂದಿತು. ದೇವರ ದರ್ಶನ, ಜಾತ್ರಾ ಸಂಭ್ರಮ ಹಾಗೂ ಕುರಿ ಮಟನ್ ಸವಿಯಲು ದೂರದ ಜಿಲ್ಲೆ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರಿಂದ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ವಾಹನ ಸಂಚಾರ ಭಾರೀ ಪ್ರಮಾಣದಲ್ಲಿ ಕಂಡುಬಂತು. ಬೈಕ್, ಕಾರು, ಬಸ್ ಸೇರಿದಂತೆ ಎಲ್ಲ ರೀತಿಯ ವಾಹನಗಳು ಮುಂಡಗೋಡಗೆ ಆಗಮಿಸಿದ ಪರಿಣಾಮ ಸಂಜೆಯ ಹೊತ್ತಿಗೆ ಪಟ್ಟಣದ ಪ್ರಮುಖ ರಸ್ತೆಗಳಾದ ಯಲ್ಲಾಪುರ, ಬಂಕಾಪುರ, ಹುಬ್ಬಳ್ಳಿ-ಶಿರಸಿ ರಸ್ತೆ ಹಾಗೂ ಶಿವಾಜಿ ಸರ್ಕಲ್ ಪ್ರದೇಶದಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಗಿ ಕೆಲಕಾಲ ಸಂಚಾರಕ್ಕೆ ತೊಂದರೆ ಎದುರಾಯಿತು.

ಈ ಸಂದರ್ಭ ಸಂಚಾರ ಸುಗಮಗೊಳಿಸಲು ಇನ್ಸ್ಪೆಕ್ಟರ್ ರಂಗನಾಥ ನಿಲಮ್ಮನವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಕಾರ್ಯನಿರ್ವಹಿಸಿ ವಾಹನ ಸಂಚಾರ ನಿಯಂತ್ರಿಸಿದರು. ರಾತ್ರಿಯಾದರೂ ವಾಹನಗಳ ಓಡಾಟ ಕಡಿಮೆಯಾಗದೇ ಮುಂದುವರಿದಿದ್ದು, ಮುಂಡಗೋಡ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹ ಭಾರೀ ಟ್ರಾಫಿಕ್ ಕಂಡುಬಂದಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ದೊಡ್ಡ ನಗರಗಳನ್ನು ಮೀರಿಸುವಂತ ಟ್ರಾಫಿಕ್ ಕಂಡು ಪಟ್ಟಣದ ಜನತೆ ಸಂತಸ ವ್ಯಕ್ತಪಡಿಸಿದ್ದು, “ಇದೇ ರೀತಿ ರಾತ್ರಿಯಾದರೂ ಜನ ಹಾಗೂ ವಾಹನ ಸಂಚಾರ ಮುಂದುವರಿದರೆ ವ್ಯಾಪಾರ ವಹಿವಾಟು ಇನ್ನಷ್ಟು ಚೇತರಿಸಿಕೊಳ್ಳಲಿದೆ” ಎಂಬ ಅಭಿಪ್ರಾಯಗಳು ಕೇಳಿಬಂದವು. ಹೊರ ಊರುಗಳಿಂದ ಬಂದವರು ಮುಂಡಗೋಡ ಪಟ್ಟಣದಲ್ಲಿ ರಾತ್ರಿಯಾದರೂ ಇಷ್ಟೊಂದು ಟ್ರಾಫಿಕ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.