ಮುಧೋಳ: ದಾನದಿಂದ ಸಂತೃಪ್ತಿಯ ಬದುಕು: ಸರಳಾ ಸಿಂಗರಡ್ಡಿ

ಲೋಕದರ್ಶನ ವರದಿ

ಮುಧೋಳ 21: ದೇವರು ಕೊಟ್ಟಿರುವುದರಲ್ಲಿಯೇ ಒಂದಿಷ್ಟನ್ನು ಅವಶ್ಯಕತೆಯಿರುವವರಿಗೆ  ದಾನ ಮಾಡುವುದರಿಂದ ಸಂತೃಪ್ತಿಯ ಬದುಕು ನಮ್ಮದಾಗಬಹುದು ಎಂದು ಶಿಕ್ಷಕಿ ಸರಳಾ ಸಿಂಗರಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಭಂಟನೂರ ಗ್ರಾಮದ ನಿವೃತ್ತ ಶಿಕ್ಷಕ ಲಕ್ಷ್ಮಣ ಮಿರ್ಜಾ  ಅವರ ನಿವಾಸದಲ್ಲಿ  ಬೆನಕಟ್ಟಿಯ ಹೇಮ-ವೇಮನ ಸದ್ಬೋಧನ ಪೀಠ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ಮಹಾಯೋಗಿ ವೇಮನರ ತತ್ವ ಚಿಂತನದ 119ನೇ ಮಾಸಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಮಹಾಯೋಗಿ ವೇಮನ ಹೇಳುವಂತೆ ಹಸಿದು ಬಂದವರಿಗೆ ಅನ್ನ ಹಾಕುವುದರಿಂದ ಅದು ಹರನಿಗೆ ಅಪರ್ಿಸಿದಂತಾಗುತ್ತದೆ ಎಂದ ಸಿಂಗರಡ್ಡಿ, ಅನ್ನದಾನಕ್ಕಿಂತ ಶ್ರೇಷ್ಠ ದಾನ ಇನ್ನೊಂದಿಲ್ಲ. ಅನ್ನದಾನದ ಮಹತ್ವ ತಿಳಿದು ದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಅತಿಥಿಯಾಗಿದ್ದ ವ್ಹಿ.ಬಿ.ಸಿಂಗರಡ್ಡಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಡಾ.ಅಶೋಕ ಸೊನ್ನದ ಮಾತನಾಡಿ, ದೇವರು ದಯಪಾಲಿಸಿದ ಸಂಪತ್ತಿನಲ್ಲಿಯೇ ಕೆಲವಷ್ಟನ್ನು ಅವಶ್ಯಕತೆಯಿದ್ದವರಿಗೆ ದಾನ ಮಾಡುವುದರಿಂದ ನಮ್ಮ ಸಂಪತ್ತು ಇನ್ನಷ್ಟು ವೃದ್ಧಿಯಾಗುತ್ತದೆ ಎಂದು ಹೇಳಿ, ಪ್ರೀತಿ, ಭಕ್ತಿ ಭಾವದಿಂದ ಯಾವುದೇ ಫಲಾಪೇಕ್ಷೆ ಬಯಸದೇ ಅನ್ನದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕೆಂದರು.

ಸಾನಿಧ್ಯವಹಿಸಿದ್ದ ಎರೆಹೊಸಳ್ಳಿಯ ರಡ್ಡಿ ಗುರುಪೀಠದ ಪೂಜ್ಯ ವೇಮನಾನಂದ ಮಹಾಸ್ವಾಮಿಗಳು ಆಶೀವರ್ಚನ ನೀಡಿ, ರಡ್ಡಿ ಕುಲ ಎಂದೆಂದಿಗೂ ದಾನ ಮಾಡುವ ದೊಡ್ಡ ಗುಣ ಹೊಂದಿದ್ದು ನಮ್ಮಲ್ಲಿರುವುದರಲ್ಲಿಯೇ ಸ್ವಲ್ಪ ದಾನ ಮಾಡಿ ಸಂತೃಪ್ತಿ ಪಡೆಯಬೇಕು ಎಂದರು.

ಅನುಸೂಯಾ ಮಿಜರ್ಿ ವೇದಿಕೆಯಲ್ಲಿದ್ದರು. ಆಶ್ರಯದಾತರಾದ ಲಕ್ಷ್ಮಪ್ಪ ಮಿರ್ಜಾ ಕುಟುಂಬದ ವತಿಯಿಂದ ಪೂಜ್ಯ ವೇಮನಾನಂದ ಶ್ರೀಗಳು ಹಾಗೂ ಡಾ.ಅಶೋಕ ಸೊನ್ನದ ಅವರನ್ನು ಸನ್ಮಾನಿಸಲಾಯಿತು. ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಮಂಡಳಿಯವರು ವೇಮನ ವಚನ ಪಠಿಸಿದರು. ವಿಠ್ಠಲ ತುಮ್ಮರಮಟ್ಟಿ ಸ್ವಾಗತಿಸಿದರು. ಹೇಮ-ವೇಮನ ಸದ್ಬೋಧನ ಪೀಠದ ಕಾರ್ಯಾಧ್ಯಕ್ಷ ಡಾ.ಶಿವಣ್ಣ ಅಮಾತೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ಅಮಲಝರಿ ನಿರೂಪಿಸಿ ವಂದಿಸಿದರು.