ಮುದ್ದೇಬಿಹಾಳ: ಎನ್ಆರ್ ಸಿ, ಎನ್ ಪಿ ಆರ್ ಕಾಯ್ದೆಗೆ ವಿರೋಧ

ಲೋಕದರ್ಶನ ವರದಿ

ಮುದ್ದೇಬಿಹಾಳ 22: ಕೇಂದ್ರ ಸರ್ಕಾರದ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಕಾಯ್ದೆ ವಿರೋಧಿಸಿ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಇತರೆ ಧರ್ಮದ ಮಹಿಳೆಯರು ಮುಸ್ಲಿಂ ಮುತ್ತಾಹಿದಾ ಕೌನ್ಸಿಲ್ನ ಮಹಿಳಾ ಘಟಕದ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನಾ ರ್ಯಾಲಿ ನಡೆಸಿ, ರಾಷ್ಟ್ರಪತಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಸಲ್ಲಿಸಿದರು. ಈ ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಈ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದೆ. 

ಇದು ಭಾರತದ ಜಾತ್ಯಾತೀತ ಆತ್ಮವನ್ನು ಕೊಲ್ಲುವ ಪ್ರಯತ್ನದ ಭಾಗವಾಗಿದೆ. ವೋಟ್ ಬ್ಯಾಂಕ್ ರೂಪಿಸುವುದಕ್ಕೆ ಕೇಂದ್ರ ಸರ್ಕಾರ ಮಾಡಿದ ತಂತ್ರ ಇದಾಗಿದೆ. ರಾಷ್ಟ್ರಪತಿಗಳು ಈ ಕಾಯ್ದೆ ಅಂಗೀಕರಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಇದಕ್ಕೂ ಮುನ್ನ ಮಹಿಬೂಬನಗರದಲ್ಲಿರುವ ಶಾದಿ ಮಹಲ್ನಲ್ಲಿ ಕೌನ್ಸಿಲ್ನ ಸದಸ್ಯಿಣಿಯರು ಸಭೆ ನಡೆಸಿದರು. ಸಿಸ್ಟರ್ ಬೀನಾ, ತಬಸ್ಸುಮ್ ಕೂಡಗಿ, ಯಾಸ್ಮೀನ್ ಯಲಗಾರ, ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕಿ ಧಾರವಾಡಕರ ಮತ್ತಿತರರು ಕಾಯ್ದೆ ಕುರಿತು ಖಂಡಿಸಿ ಮಾತನಾಡಿದರು. ಪುರಸಭೆ ಸದಸ್ಯರಾದ ಶಾಜಾದಬಿ ಹುಣಚಗಿ, ಚಾಂದಬೀ ಮಕಾನದಾರ, ಅಂಜುಮನ್ ಸಂಸ್ಥೆ ಸದಸ್ಯರು, ಸಲಾಂ ಭಾರತ ಟ್ರಸ್ಟ್ ಪದಾಧಿಕಾರಿಗಳು, ಕೌನ್ಸಿಲ್ ಸದಸ್ಯರು ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಸ್ಥಳೀಯ ಪೊಲೀಸರು ಬಂದೋಬಸ್ತ್ ವಹಿಸಿದ್ದರು.