ಲೋಕದರ್ಶನ ವರದಿ
ಮುದ್ದೇಬಿಹಾಳ 05: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮತದಾರರ ನೋಂದಣಿ ಅಧಿಕಾರಿಯೂ ಆಗಿರುವ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಇಲ್ಲಿನ ಪಿಲೇಕೆಮ್ಮ ಬಡಾವಣೆಯಲ್ಲಿರುವ ಮತಗಟ್ಟೆಗೆ ದಿಢಿರ್ ಭೇಟಿ ನೀಡಿ ಮತದಾರರ ಅಹವಾಲು ಆಲಿಸಿದರು.
ಅಸಮರ್ಪಕತೆ, ತಪ್ಪು ಮಾಹಿತಿ ಕಂಡುಬಂದಲ್ಲಿ ಸಂಬಂಧಿಸಿದ ಬಿಎಲ್ಓ ಮತ್ತು ಮೇಲಧಿಕಾರಿಗಳನ್ನು ಹೊಣೆ ಮಾಡಬೇಕಾಗುತ್ತದೆ. ಅರ್ಹರು ಮತದಾನದಿಂದ ಬಿಟ್ಟು ಹೋಗದಂತೆ, ಅನರ್ಹರು ಮತದಾರ ಪಟ್ಟಿಯಲ್ಲಿ ಸೇರಿಕೊಳ್ಳದಂತೆ ಕಟ್ಟೆಚ್ಚರ ವಹಿಸಬೇಕು ಎಂದು ತಹಸೀಲ್ದಾರ್ ಜಿ.ಎಸ್.ಮಳಗಿ ಮತ್ತು ಬಿಎಲ್ಓಗಳಿಗೆ ಎಚ್ಚರಿಕೆ ನೀಡಿದರು.
ಯಾವುದೇ ಮತದಾರ ಮತದಾನ ಹಕ್ಕಿನಿಂದ ವಂಚಿತನಾಗಬಾರದು. ನಕಲಿ ಮತದಾರರ ಸೇರ್ಪಡೆ, ಜೀವಂತ ಇರುವ ಮತದಾರರನ್ನು ಮೃತ ಮತದಾರ ಎಂದು ಪರಿಗಣನೆ, ಒಂದೇ ಸ್ಥಳದಲ್ಲಿ ವಾಸವಿದ್ದರೂ ಬೇರೆ ಕಡೆ ಹೋಗಿದ್ದಾರೆ ಎಂದು ತಪ್ಪು ಮಾಹಿತಿ ದಾಖಲಿಸುವುದು ಮುಂತಾದವು ಕಂಡುಬರದಂತೆ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿಗೆ ಮತಕ್ಷೇತ್ರ ವ್ಯಾಪ್ತಿಯಲ್ಲಿನ 13000 ಅಜರ್ಿಗಳು ಬಂದಿದ್ದು ಇವುಗಳ ಪರಿಶೀಲನೆ ಪ್ರಗತಿಯಲ್ಲಿದೆ. ಡಿ.16ರಂದು ಮತದಾರರ ಪಟ್ಟಿಯ ಕರಡು ಪ್ರತಿ ಪ್ರಕಟಿಸಲಾಗುತ್ತದೆ. ಅಲ್ಲಿಂದ ಒಂದು ತಿಂಗಳವರೆಗೆ ಆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗುತ್ತದೆ. ಈ ವೇಳೆ ಯಾರು ಬೇಕಾದರೂ ಆಕ್ಷೇಪಣೆ ಸಲ್ಲಿಸಬಹುದು. ಬಿಎಲ್ಓ ಇನ್ನಿತರ ಅಧಿಕಾರಿಗಳು ಅಂಥ ಆಕ್ಷೇಪಣೆಗಳ ನೈಜತೆ ಪರಿಶೀಲಿಸಿ ಅಂತಿಮ ಪಟ್ಟಿ ಪ್ರಕಟಣೆಗೆ ಅವಕಾಶ ಮಾಕೊಡುತ್ತಾರೆ. ಪರಿಶೀಲನಾ ಅವಧಿ ಮುಗಿದ ನಂತರ 2020ರ ಫೆಬ್ರವರಿ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದರು.
ಸಹಾಯಕ ಮತದಾರ ನೋಂದಣಿ ಅಧಿಕಾರಿಯೂ ಆಗಿರುವ ತಹಸೀಲ್ದಾರ್ ಜಿ.ಎಸ್.ಮಳಗಿ, ಕಂದಾಯ ನಿರೀಕ್ಷಕ ಸುಭಾಷ ವಡವಡಗಿ, ತಹಸೀಲ್ದಾರ್ ಕಚೇರಿ ಚುನಾವಣಾ ಸಿಬ್ಬಂದಿ ಸಚಿನ್ ಗೌಡರ, ಆಯಾ ಮತಗಟ್ಟೆಗಳ ಬಿಎಲ್ಓಗಳು, ಮತದಾರರು ಇದ್ದರು.