ಮುದ್ದೇಬಿಹಾಳ: ವ್ಯಕ್ತಿ ಕೊಲೆ ಮೂವರು ಆರೋಪಿತರ ಬಂಧನ

ಲೋಕದರ್ಶನ ವರದಿ

ಮುದ್ದೇಬಿಹಾಳ 20: ಹೊಕ್ರಾಣಿ ಗ್ರಾಮದ ಗುರಪ್ಪ ಕರಕಪ್ಪ ಜಗಲಿ (30) ಎಂಬಾತನ ಕೊಲೆ ಆರೋಪದ ಮೇಲೆ ಅದೇ ಗ್ರಾಮದ ರಹೆಮಾನಸಾಬ ಬುರಾನಸಾಬ ಗುರಿಕಾರ (38), ಶರಣಪ್ಪ ಮಲ್ಲಪ್ಪ ಜಗಲಿ (38), ಬೀರಪ್ಪ ಬಸಪ್ಪ ಮುರಾಳ (38) ಇವರನ್ನು ಮುದ್ದೇಬಿಹಾಳ ಪೊಲೀಸರು ಬಂಧಿಸಿ ಸೋಮವಾರ ಜೈಲಿಗೆ ಕಳಿಸಿದ್ದಾರೆ. ಕೊಲೆಗೆ ಅನೈತಿಕ ಸಂಬಂಧ ಕಾರಣವಾಗಿದೆ. ಗುರಪ್ಪನನ್ನು ಹಳ್ಳೂರ ಗ್ರಾಮವ್ಯಾಪ್ತಿಯ ಹೊಲವೊಂದರ ಬಳಿ ಕರೆದೊಯ್ದು ಮದ್ಯಪಾನ ಮಾಡಿಸಿ ಕೊಲೆ ಮಾಡಿ ಶವವನ್ನು ಸೇತುವೆ ಕೆಳಭಾಗ ಮುಚ್ಚಿಟ್ಟಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರಕರಣ ಬೇಧಿಸಲು ಎಸ್ಪಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಎಸ್ಪಿ ಡಾ.ರಾಮ ಅರಸಿದ್ದಿ, ಬಸವನ ಬಾಗೇವಾಡಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಈ ಶಾಂತವೀರ ಅವರ ಮಾರ್ಗದರ್ಶನದಲ್ಲಿ ಸಿಪಿಐ ಆನಂದ ವಾಗಮೋಡೆ ನೇತೃತ್ವದ ತಂಡವೊಂದನ್ನು ರಚಿಸಲಾಗಿತ್ತು. ತಂಡದಲ್ಲಿದ್ದ ಪಿಎಸೈ ಎಂ.ಡಿ.ಮಡ್ಡಿ, ಸಿಬ್ಬಂದಿಗಳಾದ ಆರ್.ಎಸ್.ಪಾಟೀಲ, ಡಿ.ಬಿ.ಲಮಾಣಿ, ಮಹೇಶ ಹೂಗಾರ, ಎಸ್.ಪಿ.ಜಾಧವ, ಎಸ್.ಜಿ.ಬನ್ನೆಟ್ಟಿ, ಎಸ್.ವಿ.ಬಿರಾದಾರ, ಸಂಗಮೇಶ ಚಲವಾದಿ ಇವರನ್ನು ಎಸ್ಪಿ ಪ್ರಕಾಶ ನಿಕ್ಕಂ ಶ್ಲಾಘಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಘಟನೆಯ ವಿವರ:

ಜ.14ರ ರಾತ್ರಿ ಮುದ್ದೇಬಿಹಾಳ ತಾಲೂಕು ಮಡಿಕೇಶ್ವರ ಕ್ರಾಸ್ ಬಳಿ ಸೇತುವೆ ಪುರುಷನ ಶವ ದೊರಕಿತ್ತು. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಶವದ ಗುರ್ತಿ  ಪತ್ತೇ ಆಗಿರಲಿಲ್ಲ. ಜ.15 ರಂದು ಹೊಕ್ರಾಣಿ ಗ್ರಾಮದ ಕರಕಪ್ಪ ಜಗಲಿ ಎನ್ನುವವರು ಆ ಶವವನ್ನು ಗುರ್ತಿಸಿ ಅದು ತನ್ನ ಮಗ ಗುರಪ್ಪನದ್ದು ಎಂದು ಹೇಳಿಕೆ ನೀಡಿದ್ದರು. ಆತನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳು ಯಾರು ಎನ್ನುವುದು ಗೊತ್ತಿಲ್ಲದ ಕಾರಣ ಎಸ್ಪಿ ಅವರು ತಂಡ ರಚಿಸಿದ್ದರು. ಪ್ರಕರಣ ದಾಖಲಾದ 4-5 ದಿನಗಳಲ್ಲೇ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.