ಮುದ್ದೇಬಿಹಾಳ: ಬಿಡಾಡಿ ದನ ನಿಯಂತ್ರಣಕ್ಕೆ ಆಗ್ರಹ

ಲೋಕದರ್ಶನ ವರದಿ

ಮುದ್ದೇಬಿಹಾಳ 09: ಪಟ್ಟಣದ ಬಸ್ ನಿಲ್ದಾಣ ಎದುರು, ಬಸವೇಶ್ವರ ವೃತ್ತ, ಮಹಾತ್ಮಾ ಗಾಂಧಿ ಮುಖ್ಯ ರಸ್ತೆ ಸೇರಿ ಹಲವು ಪ್ರಮುಖ ಜನನಿಬಿಡ ರಸ್ತೆಗಳಲ್ಲಿ ಬಿಡಾಡಿ ದನಗಳು ಬೇಕಾಬಿಟ್ಟಿಯಾಗಿ ನಿಂತು, ಮಲಗಿ ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟು ಮಾಡುತ್ತಿವೆ. ಪುರಸಭೆಯವರು ಕೂಡಲೇ ಇಂಥ ಬಿಡಾಡಿ ದನಗಳನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಬಸವೇಶ್ವರ ವೃತ್ತದಲ್ಲಿ ಗುರುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಮಿನಿ ಸಂತೆ ನಡೆಯುತ್ತದೆ. ಇಲ್ಲಿರುವ ಕಾಯಿಪಲ್ಯೆ ಅಂಗಡಿಯವರು, ಕಾಯಿಪಲ್ಯೆ ಮಾರಾಟಗಾರರು ಸಂಜೆ ಅಳಿದುಳಿದ ಕಾಯಿಪಲ್ಯೆ, ಕೊಳೆತ ಹಣ್ಣು ಮುಂತಾದವುಗಳನ್ನು ರಸ್ತೆಯಲ್ಲೇ ಬಿಸಾಕುತ್ತಾರೆ. ಇದನ್ನು ತಿನ್ನುವ ಆಸೆಗೆ ಬರುವ ಬಿಡಾಡಿ ದನಗಳು ಅಲ್ಲೇ ಝಂಡಾ ಊರಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಸಾಕಷ್ಟು ಕಿರಿ ಕಿರಿ ತಂದೊಡ್ಡುತ್ತಿವೆ. ಹಲವು ಬಾರಿ ಬೈಕ್ ಸವಾರರು ಇಂಥ ದನಗಳ ಹಾವಳಿಯಿಂದ ರಸ್ತೆ ಮೇಲೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ದೊಡ್ಡ ವಾಹನಗಳ ಚಕ್ರಗಳು ರಸ್ತೆ ಪಕ್ಕ ಮಲಗಿದ್ದ ದನಗಳ ಕಾಲುಗಳ ಮೇಲೆ ಹರಿದು ಅವು ತೊಂದರೆಗೊಳಗಾದ ಪ್ರಸಂಗಗಳೂ ಸಾಕಷ್ಟು ನಡೆದಿವೆ. ನಿತ್ಯ ಹಗಲು, ರಾತ್ರಿ ಇಲ್ಲೇ ಬಿಡಾರ ಹೂಡುವ ದನಗಳ ಹಾವಳಿ ಸಹಿಸಲಸಾಧ್ಯವಾಗಿದೆ. ಪುರಸಭೆಯವರು ಈಗಲಾದರೂ ಎಚ್ಚೆತ್ತುಕೊಂಡು ಇಂಥ ಬಿಡಾಡಿ ದನಗಳನ್ನು ದೂರ ಅಟ್ಟಿ ರಸ್ತೆಗಳನ್ನು ಸಂಚಾರ ಮುಕ್ತಗೊಳಿಸಿ ಅಪಾಯ, ಅಪಘಾತದಿಂದ ತಪ್ಪಿಸಬೇಕು ಎಂದು ಈ ರಸ್ತೆಗಳಲ್ಲಿ ನಿತ್ಯ ಸಂಚರಿಸುವ ಜನರು ಮನವಿ ಮಾಡಿದ್ದಾರೆ. 

ಪುರಸಭೆಯವರು ಎಚ್ಚೆತ್ತುಕೊಂಡು ಬಿಡಾಡಿ ದನ ನಿಯಂತ್ರಿಸದೆ ಹೋದಲ್ಲಿ ಸಾರ್ವಜನಿಕರು ಸ್ಥಳೀಯ ಜನಪರ ಸಂಘಟನೆಗಳ ಜೊತೆ ಸೇರಿಕೊಂಡು ಪುರಸಭೆ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.