ಮುದ್ದೇಬಿಹಾಳ 03: ಪಟ್ಟಣದ ವಿಜಯಪುರ ರಸ್ತೆಯಲ್ಲಿ (ಅಂಜುಮನ್ ಶಾಲೆಯ ಎದುರು) ಇದ್ದ ಗುಲ್ಲಮೋಹರ್ ಮರವೊಂದು ಹಠಾತ್ ಧರೆಗುರಳಿದ ಘಟನೆ ಸೋಮವಾರ ಸಂಜೆ ನಡೆಯಿತು. ಘಟನೆಯಲ್ಲಿ ಅದೇ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಕುಂಬಾರ ಎನ್ನುವ ದಂಪತಿ ಮೇಲೆ ಬಿದ್ದಿತಾದರೂ ಅದೃಷ್ಟವಶಾತ್ ಅವರಿಗೆ ಸಣ್ಣಪುಟ್ಟ ಗಾಯಗಳಾದವು. ಆದರೆ ಮರ ಅಲ್ಲಿಯೇ ಇದ್ದ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಭಾರೀ ಅನಾಹುತವಾಗುವ ಸಾಧ್ಯತೆ ಇತ್ತು. ಅದೇ ರಸ್ತೆಯಲ್ಲಿ ಹೊರಟಿದ್ದ ಢವಳಗಿಯ ವಿನೋದಗೌಡ ಕೊಣ್ಣೂರ ಕೂಡಲೇ ಹೆಸ್ಕಾಂ ಅಧಿಕಾರಿ ಬಿ.ಎಸ್.ಯಲಗೋಡ ಅವರನ್ನು ಸಂಪರ್ಕಿಸಿ, ವಿದ್ಯುತ್ ಪ್ರಸರಣ ನಿಲ್ಲುವಂತೆ ಮಾಡಿದರು. ನಂತರ ಅಲ್ಲಿದ್ದ ಗ್ಯಾರೇಜ್ ಮಾಲೀಕ ಶಬ್ಬೀರ ಮತ್ತಿತರರು ಬೈಕ್ ಮೇಲಿದ್ದ ಕುಂಬಾರ ದಂಪತಿಗಳನ್ನು ಉಪಚರಿಸಿ ಕಳಿಸಿದರು.