ಲೋಕದರ್ಶನ ವರದಿ
ಮುದ್ದೇಬಿಹಾಳ 04: ಪಟ್ಟಣದ ಹಸಿರು ತೋರಣ ಗೆಳೆಯರ ಬಳಗವು ಪ್ರತೀ ವರ್ಷ ನೀಡುತ್ತಿರುವ "ಪರಿಸರ ಮಿತ್ರ ಪ್ರಶಸ್ತಿಗೆ 2019 ನೇ ಸಾಲಿಗೆ ನಾಲ್ಕು ಜನರು ಆಯ್ಕೆಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ, ತಂಗಡಗಿಯ ಸಮಾಜ ಸೇವಕ ಬಸವರಾಜ ನಿಡಗುಂದಿ,
ತಾಲ್ಲೂಕಿನ ಸಾಮಾಜಿಕ ವಲಯ ಅರಣ್ಯ ಇಲಾಖೆಯಲ್ಲಿ ನೆಡುತೋಪು ಕಾವಲುಗಾರ ಜಗದೀಶ ಪಿ. ನಾಗರಬೆಟ್ಟ, ಪ್ರಾದೇಶಿಕ ಅರಣ್ಯ ವಲಯ ಇಲಾಖೆ ವತಿಯಿಂದ ಇಣಚಗಲ್ಲ ಸಸ್ಯಪಾಲನಾಲಯದಲ್ಲಿ 17 ವರ್ಷಗಳಿಂದ ದಿನಗೂಲಿ ಕೆಲಸ ಮಾಡುವ ಮಮತಾಜಬಿ ಸಾಹೇಬಲಾಲ ನಾಯ್ಕೋಡಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತಾಲ್ಲೂಕಿನಾದ್ಯಂತ ಇರುವ ಶಾಲೆಗಳಿಗೆ ಭೇಟಿ ನೀಡುತ್ತಲೇ ಎಲ್ಲ ಶಾಲೆಗಳ ಆವರಣ, ಮೈದಾನಗಳಲ್ಲಿ ಗಿಡಗಳನ್ನು ಬೆಳೆಸಲು ಶಿಕ್ಷಕ ವೃಂದಕ್ಕೆ ನೀಡುತ್ತಿರುವ ಪ್ರೋತ್ಸಾಹ, ವೈಯಕ್ತಿಕವಾಗಿ ಅವರ ಪರಿಸರ ಪ್ರೀತಿ, ಕಾಳಜಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಂಗಡಗಿ ಗ್ರಾಮದಲ್ಲಿ ಪರಿಸರ ಪ್ರಜ್ಞೆ ಮೂಡಿಸಿರುವ, ನೂರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ, ಹಾಗೂ ಸುಮಾರು ಮೂರು ಸಾವಿರಕ್ಕೂ ಬೀಜದುಂಡೆಗಳನ್ನು ತಯಾರಿಸಿ, ತಂಗಡಗಿ ವ್ಯಾಪ್ತಿಯ ಕಾಲುವೆಗಳಗುಂಟ ಅವುಗಳನ್ನು ನೆಡುವ ಮೂಲಕ ಪರಿಸರದ ಕಾಳಜಿ ತೋರಿದ ಬಸವರಾಜ ಸಿದ್ರಾಮಪ್ಪ ನಿಡಗುಂದಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತಾಲ್ಲೂಕಿನ ಸಾಮಾಜಿಕ ವಲಯ ಅರಣ್ಯ ಇಲಾಖೆಯಲ್ಲಿ ನೆಡುತೋಪು ಕಾವಲುಗಾರನಾಗಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತ, ಹಿರೇಮುರಾಳದಿಂದ ಹುನಕುಂಟಿಯವರೆಗೆ ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುತ್ತಿರುವ ಜಗದೀಶ ಪರಮಪ್ಪ ನಾಗರಬೆಟ್ಟ ಹಾಗೂ ತಾಲ್ಲೂಕಿನ ಪ್ರಾದೇಶಿಕ ಅರಣ್ಯ ವಲಯ ಇಲಾಖೆಯ ಇಣಚಗಲ್ಲ ಸಸ್ಯಪಾಲನಾಲಯದಲ್ಲಿ 17 ವರ್ಷಗಳಿಂದ ದಿನಗೂಲಿ ನೌಕರಳಾಗಿ ಕೆಲಸ ಮಾಡುತ್ತ ಬಂದಿರುವ ಮಮತಾಜಬಿ ಸಾಹೇಬಲಾಲ ನಾಯ್ಕೋಡಿ ಪ್ರಾಮಾಣಿಕ ಸೇವೆ, ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಜೂನ್ 5 ರಂದು ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಹಸಿರು ತೋರಣ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಅದೇ ಸಮಾರಂಭದಲ್ಲಿ ಈ ಎಲ್ಲ ಸಾಧಕರಿಗೆ ಸನ್ಮಾನಿಸಲಾಗುವುದೆಂದು ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ನಾಗಭೂಷಣ ನಾವದಗಿ, ಕಾರ್ಯದರ್ಶಿ ಸುರೇಶ ಕಲಾಲ ಹಾಗೂ ಸಂಚಾಲಕ ಮಹಾಬಲೇಶ್ವರ ಗಡೇದ ತಿಳಿಸಿದ್ದಾರೆ. ಸಮಾರಂಭಕ್ಕೆ ತಾಲ್ಲೂಕಿನ ಎಲ್ಲ ಪರಿಸರ ಪ್ರೀತಿಯ ಸ್ನೇಹಿತರು ಬರಬೇಕೆಂದು ಬಳಗ ಮನವಿ ಮಾಡಿದೆ.