ಲೋಕದರ್ಶನ ವರದಿ
ಮುದ್ದೇಬಿಹಾಳ 21: ತಾಲೂಕಿನ ಬಿದರಕುಂದಿ ಗ್ರಾಮ ಪಂಚಾಯಿತಿಗೆ 3ನೇ ವಾರ್ಡನ ನಿವಾಸಿಗಳು ಶನಿವಾರ ಮುತ್ತಿಗೆ ಹಾಕಿ, ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವ ಮೂಲಕ ಕುಡಿವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದರು. ಬೇಕೇ ಬೇಕು ನೀರು ಬೇಕು, ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಘೋಷಣೆ ಕೂಗುತ್ತ ಧರಣಿ ಪ್ರಾರಂಭಿಸಿದ ಜನರು ಗ್ರಾಪಂ ಆಡಳಿತ, ಪಂಚಾಯಿತಿ ಸಿಬ್ಬಂದಿಗೆ ಧಿಕ್ಕಾರ ಕೂಗಿದರು.
3ನೇ ವಾರ್ಡ ಗ್ರಾಮದಿಂದ ಅಂದಾಜು 800 ಮೀಟರ್ ದೂರದಲ್ಲಿರುವ ವಿಜಯಪುರ ರಸ್ತೆ ಪಕ್ಕದಲ್ಲಿ ಇದೆ. ಇದಕ್ಕೆ ಬಿದರಕುಂದಿ ಕ್ರಾಸ್ ಎಂದೇ ಕರೆಯಲಾಗುತ್ತದೆ. ಇಲ್ಲಿ ಅಂದಾಜು 200 ಮನೆಗಳು ಇವೆ. ಇಲ್ಲಿನ ಜನರಿಗೆ ನಲ್ಲಿ ಸಂಪರ್ಕ ಇಲ್ಲ. ಹೀಗಾಗಿ ರಸ್ತೆಪಕ್ಕದಲ್ಲಿರುವ ಒಂದೇ ಕಿರು ನೀರು ಸರಬರಾಜು ಯೋಜನೆ ಅಡಿ ಸೀಮಿತ ಅವಧಿಯಲ್ಲಿ ಬಿಟ್ಟ ನೀರನ್ನು ತುಂಬಿಟ್ಟುಕೊಳ್ಳುವ ಅನಿವಾರ್ಯತೆ ಇದೆ. ಹಲವು ಬಾರಿ ಸಮಸ್ಯೆ ಪರಿಹಾರಕ್ಕೆ ಕೋರಿದ್ದರೂ ಪ್ರಯೋಜನ ಕಾಣದೆ ಇರುವುದರಿಂದ ಆಕ್ರೋಶಗೊಂಡ ಬೀಗ ಜಡಿಯುವ ತೀಮರ್ಾನ ಕಾರ್ಯರೂಪಕ್ಕೆ ತಂದಿದ್ದರು.
ಈ ಸಂದರ್ಭ ಮಾತನಾಡಿದ ನಿವಾಸಿಗಳು ನಸುಕಿನಲ್ಲಿ 3ಕ್ಕೆ ಎದ್ದು ನೀರು ತರುವ ದುಸ್ಥಿತಿ ಕಳೆದ 3-4 ತಿಂಗಳಿಂದಲೂ ಇದೆ. ನೀರು ಬರುವುದನ್ನು ಕಾಯುತ್ತ ರಸ್ತೆಯಲ್ಲೇ ಮಲಗಿಕೊಂಡಿದ್ದೇವೆ. ಹಲವು ಬಾರಿ ಗ್ರಾಪಂ ಪಿಡಿಓ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದರೂ ಸ್ಪಂಧಿಸುತ್ತಿಲ್ಲ. ಗ್ರಾಪಂ ಆಡಳಿತದ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಬಸರಕೋಡ ಬಹುಹಳ್ಳಿ ಕುಡಿವ ನೀರಿನ ಸಂಪರ್ಕ ಇದೆ. ಆದರೆ ಕ್ರಾಸ್ನಲ್ಲಿರುವ ಜನರಿಗೆ ಇದರ ಪ್ರಯೋಜನ ದೊರಕಿಸಿ ಕೊಟ್ಟಿಲ್ಲ. ಕ್ರಾಸ್ನಲ್ಲಿರುವ ಜನತೆಗೆ ಪೈಪಲೈನ್ ಮೂಲಕ ನಲ್ಲಿ ನೀರು ಕೊಡಲು ಯೋಜನೆ ರೂಪಿಸಿದ್ದರೂ ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಹೀಗಾಗಿ ಇರುವ ಒಂದೇ ಟ್ಯಾಂಕಿಗೆ ನಿತ್ಯ ನೂರಾರು ಜನ ಮುಗಿಬಿದ್ದು ನೀರು ತರುವ ಪರಿಸ್ಥಿತಿ ಇದೆ ಎಂದು ಪರಿಸ್ಥಿತಿ ವಿವರಿಸಿದರು.
ಗ್ರಾಮೀಣ ನೀರು ಸರಬರಾಜು ಇಲಾಖೆಯು ಕುಡಿವ ನೀರಿನ ಸಮಸ್ಯೆ ಪರಿಹಾರದ ಹೊಣೆ ಹೊಂದಿದೆ. ಇವರಿಗೆ ಪಂಚಾಯಿತಿಯವರು ಸಹಕಾರ ನೀಡಬೇಕು. ಆದರೆ ಇಲ್ಲಿ ಸಹಕಾರ ಇಲ್ಲದಿರುವುದು ಮತ್ತು ಇಲಾಖೆಯ ಇಂಜಿನೀಯರ್ ಜೆ.ಪಿ.ಶೆಟ್ಟಿ ಅವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸದಿರುವುದು ಸಮಸ್ಯೆ ಗಂಭೀರಗೊಳ್ಳಲು ಕಾರಣವಾಗಿದೆ ಎಂದು ಜನರು ದೂರಿದರು.
ತಾಪಂ ಸಿಇಓಗೆ ಘೇರಾವ್:
ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸುತ್ತಿರುವ ವಿಷಯ ತಿಳಿದ ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ ಸ್ಥಳಕ್ಕೆ ಆಗಮಿಸಿದರು. ಆಕ್ರೋಶಗೊಂಡಿದ್ದ ಜನರು ಅವರಿಗೆ ಘೇರಾವ ಹಾಕಿದಾಗ ವಾಗ್ವಾದ ನಡೆಯಿತು. ಕ್ರಾಸನಲ್ಲಿರುವ ಜನರಿಗೆ ನೀರಿನ ವ್ಯವಸ್ಥೆ ಮಾಡುವವರೆಗೂ ಧರಣಿ ಕೈಬಿಡುವುದಿಲ್ಲ, ಕಚೇರಿಗೆ ಹಾಕಿದ ಬೀಗವನ್ನೂ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಹೇಗೋ ಹರಸಾಹಸಪಟ್ಟು ಜನರ ಮನವೊಲಿಸುವಲ್ಲಿ ಯಶಸ್ವಿಯಾದ ದೇಸಾಯಿ ಅವರು ಚುನಾವಣೆಯ ನೀತಿ ಸಂಹಿತೆ ಮುಗಿದ ಕೂಡಲೇ ಶಾಸ್ವತ ಪರಿಹಾರ ಕಲ್ಪಿಸುವ ಮತ್ತು ಅಲ್ಲೀವರೆಗೂ ನೀರು ಪೂರೈಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿ ಧರಣಿ ಅಂತ್ಯಗೊಳಿಸುವಂತೆ ಜನತೆಗೆ ಮನವಿ ಮಾಡಿದರು.