ವರದಿ: ಸುಧೀರ ನಾಯರ್
ಮೂಡಲಗಿ 20: ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಚೆರಂಡಿಗಳು ಇಲ್ಲದೇ ಕೆಲ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ವಾಹನ ಸವಾರರು ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.
ಮೂಡಲಗಿ-ಗುರ್ಲಾಪೂರ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಡಾಂಬರ್ ಕಿತ್ತು ಹೋಗಿ 4 ಕಿ.ಮೀ ಸಾಗಬೇಕಾದರೆ ವಾಹನ ಸವಾರರ ರೋದನೆ ಕೇಳುವಂತಿಲ್ಲ. ಸುಮಾರು ಒಂದು ವರ್ಷಗಳಿಂದ ಈ ರಸ್ತೆ ದುರಸ್ಥಿಗಾಗಿ ಹೋರಾಟ ನಡೆಸಿದರು ಯಾವೂದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಾಟಚಾರಕ್ಕೆ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿರುವುದು ಈಗ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಕಾಟಚಾರಕ್ಕೆ ಹಾಕಿದ್ದ ಮಣ್ಣು ಕೊಚ್ಚಿ ಹೋಗಿ ರಸ್ತೆಯೂ ಹಳ್ಳವಾಗಿ ಮಾರ್ಪಡುಗೊಂಡು ರಸ್ತೆ ಎಲ್ಲಿದೆ ? ಗುಂಡಿ ಎಲ್ಲಿದೆ ಎಂದು ಸವಾರರು ಪರದಾಡುವಂತಾಗಿದೆ. ಕೆಲವೂ ಕಡೆಗಳಲ್ಲಿ ಚರಂಡಿಗಳೇ ಮಾಯವಾಗಿದ್ದು ಸಾರ್ವಜನಿಕರಿಗೆ ಆಶ್ಚರ್ಯಕರ ಸಂಗತಿಯಾಗಿದೆ.
ಈ ರಸ್ತೆಯಲ್ಲಿ ಪ್ರತಿದಿನ ಸರ್ಕಾರಿ ಹಾಗೂ ಶಾಲಾ ಬಸ್ಸುಗಳು ಸೇರಿದಂತೆ ಸಾವಿರಾರು ವಾಹನಗಳು ಹೋಡಾಡುತ್ತವೆ ಅಲ್ಲದೇ ಸೈಕಲ್ ಮೂಲಕ ನೂರಾರು ಶಾಲಾ ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಸಾಗಬೇಕಾಗಿದೆ. ಈ ಹಿಂದೆ ಸಾಕಷ್ಟು ಅಪಘಾತಗಳು ಸಂಭವಿಸಿ ಸಾವು ನೋವು ಆಗಿರುವ ಹಲವು ಪ್ರಕರಣಗಳಿವೆ ಆದರೂ ಈ ರಸ್ತೆಯ ಬಗ್ಗೆ ಅಧಿಕಾರಿಗಳು ಮೌನವಹಿಸಿರುವುದು ವಾಹನ ಸವಾರರ ಹಾಗೂ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚೆತ್ತುಕೊಂಡು ಶೀಘ್ರವಾಗಿ ರಸ್ತೆ ದುರಸ್ಥಿಕಾರ್ಯವನ್ನು ಮಾಡಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಗಾಗಿ ಉಗ್ರ ಹೋರಾಟ ನಡೆಯುವುದರಲ್ಲಿ ಅಚ್ಚರಿಯಿಲ್ಲ.