‘ಮಿಸ್ಟರ್ 360’ ಎಬಿಡಿ ಅತಿ ವೇಗದ ಶತಕಕ್ಕೆ 5 ವರ್ಷಗಳು

ನವದೆಹಲಿ, ಜ 18 , ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರ ಭಾರತದ ಅಭಿಮಾನಿಗಳು 2015ರ ಜನವರಿ 18 ರ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ ಶತಕ ಸಿಡಿಸಿದ ಎಬಿಡಿ ಸಾಧನೆಗೆ ಇದೀಗ ಐದು ವರ್ಷ ತುಂಬಿದೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಎಬಿಡಿ ಈ ಮೈಲುಗಲ್ಲು ಸೃಷ್ಠಿಸಿದ್ದರು. ಒಂದೇ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಹಾಗೂ ಶತಕ ಸಿಡಿಸಿದ್ದರು. ಜೋಹಾನ್ಸ್ ಬರ್ಗ್ ನಲ್ಲಿ ಸೇರಿದ್ದ ಅಪಾರ ತವರು ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದ್ದರು. ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ನ್ಯೂಜಿಲೆಂಡ್ ನ ಕೋರಿ ಅಂಡರ್ಸನ್ ಅವರ ದಾಖಲೆಯನ್ನು ಆಫ್ರಿಕಾ ಆಟಗಾರ ಮುರಿದಿದ್ದರು. ಎಬಿಡಿ ಅಂತಿಮವಾಗಿ ಕೇವಲ 44 ಎಸೆತಗಳಲ್ಲಿ 149 ರನ್ ಗಳಿಸಿದ್ದರು. ಇವರ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 439 ರನ್ ದಾಖಲಿಸಿತ್ತು. ನಂತರ. ಗುರಿ ಹಿಂಬಾಲಿಸಿದ್ದ ವೆಸ್ಟ್ ಇಂಡೀಸ್ 148 ರನ್ ಗಳಿಂದ ಸೋಲು ಅನುಭವಿಸಿತ್ತು. ಇದಾದ ಬಳಿಕ 2015 ವಿಶ್ವಕಪ್ ಟೂರ್ನಿಯಲ್ಲಿ ಇದೇ ತಂಡದ ವಿರುದ್ಧ ಅತಿ ವೇಗವಾಗಿ 150 ರನ್ ಗಳಿಸಿದ್ದರು. ಕೇವಲ 64 ಎಸೆತಗಳಲ್ಲಿ 150 ರನ್ ಸಿಡಿಸಿದ್ದರು. ಸದ್ಯ ಎಬಿಡಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ಟೂರ್ನಿಯಲ್ಲಿ ಬ್ರಿಸ್ಬೇನ್ ಹೀಟ್ ಪರ ಆಡುತ್ತಿದ್ದಾರೆ. ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ದೇಶದ ಪರ ಆಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು.