ಸಾರಿಗೆ ಆಯುಕ್ತರ ವರ್ಗಾವಣೆಗೆ ವಾಹನ ಚಾಲಕರ ಸಂಘ ಒತ್ತಾಯ

ಬೆಂಗಳೂರು, ಮೇ 23,ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ  ಚಾಲಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವ 5000 ರೂ. ಪರಿಹಾರ ಪಡೆಯಲು ಕಠಿಣ ನಿಯಮಗಳನ್ನು ತೆಗೆದುಹಾಕಿದ್ದರೂ ಸಾರಿಗೆ ಆಯುಕ್ತರು ಚಾಲಕರಿಗೆ ಕಷ್ಟ ಕೊಡಲೆಂದೇ ಮತ್ತೆ ಅವುಗಳನ್ನು ಸೇವಾ ಸಿಂಧು ಆಪ್‌ನಲ್ಲಿ ಅಳವಡಿಸಿದ್ದಾರೆ. ಆದ್ದರಿಂದ ಕೂಡಲೇ ಆಯುಕ್ತರನ್ನು ವರ್ಗಾವಣೆ ಮಾಡಬೇಕು ಎಂದು ರಾಷ್ಟ್ರೀಯ ವಾಹನ ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಒತ್ತಾಯಿಸಿದ್ದಾರೆ.ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೂ ಅವರು ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಆಟೋ ಮತ್ತು ಟ್ಯಾಕ್ಸಿ  ಚಾಲಕರಿಗೆ ಲಾಕ್‌ಡೌನ್ ನಿಂದ ಸಂಕಷ್ಟದಲ್ಲಿದ್ದ 5 ಸಾವಿರ ರೂ. ಪರಿಹಾರ ವಿತರಿಸಲು  ಸಾರಿಗೆ ಇಲಾಖೆಗೆ ಸೂಚಿಸಲಾಗಿತ್ತು. ಅದೇ ದಿನ ಸಾರಿಗೆ ಆಯುಕ್ತರು ಚಾಲಕರ ಒಕ್ಕೂಟದ ಸಭೆ  ಕರೆದು ಸಲಹೆ ಸೂಚನೆಗಳನ್ನು ಕೇಳಿದ್ದರು. ಸಲಹೆಗಳನ್ನು  ಸ್ವೀಕರಿಸಿ ವಿವಿಧ ಕಷ್ಟಕರವಾದ ನಿಬಂಧನೆಗಳನ್ನು ವಿಧಿಸಿ ಚಾಲಕರು ಸಮಸ್ಯೆಯಲ್ಲಿ  ಸಿಲುಕುವಂತೆ ಮಾಡಿದ್ದರು. ಮತ್ತೆ ಮೇ 21ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ  ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಲಕ್ಷ್ಮಣ ಸವದಿ ಅವರೇ ಯಾವುದೇ ರೀತಿಯ ಕಠಿಣ ದಾಖಲೆ ಕೇಳದೆ  ಆಧಾರ್ ಮತ್ತು ಡಿಎಲ್ ಪಡೆದು ಹಣ ವರ್ಗಾವಣೆ ಸೂಚನೆ ನೀಡಿದ್ದರು.
ಆದರೂ  ಸಹ ಸಾರಿಗೆ ಸಚಿವರ ಮಾತಿಗೂ ಕಿಮ್ಮತ್ತು ನೀಡದೇ ಮತ್ತೆ ಸೇವಾಸಿಂಧು ಆಪ್ ನಲ್ಲಿ ಛಾರ್ಸಿ  ನಂಬರ್, ವಾಹನದ ಆರ್‌ಸಿ ನಂಬರ್, ಇನ್ನಿತರ ಅಡತಡೆ ಉಂಟಾಗುವ ದಾಖಲಾತಿಗಳನ್ನು ಕೇಳುವಂತೆ  ಮಾಡಿ ಸಮಗ್ರ ಚಾಲಕರ ಸಮುದಾಯಕ್ಕೆ ಅನ್ಯಾಯ ಮಾಡುವ ಮೂಲಕ ದ್ರೋಹ ಮಾಡುತ್ತಿದ್ದಾರೆ.  ಕೂಡಲೇ ಆಯುಕ್ತರಾದ ಶಿವಕುಮಾರ್ ಅವರನ್ನು ಸಾರಿಗೆ ಆಯುಕ್ತ ಸ್ಥಾನದಿಂದ ವಜಾಗೊಳಿಸಿ.  ಇವರನ್ನು ಮುಂದುವರೆಸಿದರೆ ಸರ್ಕಾರದ ವಿರುದ್ಧ ಚಾಲಕರುಗಳು ಸಿಡಿದೆದ್ದು ಹೋರಾಟ  ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಸಾರಿಗೆ ಆಯುಕ್ತ ಶಿವಕುಮಾರ್ ಅವರನ್ನು  ಕಿತ್ತೊಗೆದು ವರ್ಗಾವಣೇ ಮಾಡಿ ಹಾಗೂ ಸೇವಾ ಸಿಂಧು ಆಪ್ ನಲ್ಲಿ ನಮೂದಿಸಿರುವ ವಾಹನಗಳ  ಸಂಖ್ಯೆ ಛಾರ್ಸಿ ನಂಬರ್ ತೆಗೆದು ಸರಳ ರೀತಿಯಲ್ಲಿ ಚಾಲಕರಿಗೆ ಅನುಕೂಲ ಮಾಡುವಂತೆ ಮಾಡಿ  ಪರಿಹಾರ ನೀಡಲು ಕ್ರಮವಹಿಸಬೇಕು. ಸರ್ಕಾರ ಚಾಲಕರಿಗೆ ನೀಡಿರುವ  5000/ ರೂ.ಪರಿಹಾರ  ಹಣ ನೀಡಲು ಸಾರಿಗೆ ಆಯುಕ್ತ ಶಿವಕುಮಾರ್ ರವರು ಚಾಲಕರಿಗೆ ಮಾನಸಿಕ  ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಬೇರೆ ಬೇರೆ  ವಾಹನವನ್ನು ಚಲಾಯಿಸುವ ಚಾಲಕರು ಛಾರ್ಸಿ ನಂಬರ್ ಎಲ್ಲಿಂದ ಕೊಡುತ್ತಾರೆ ಎಂಬ ಸಾಮಾನ್ಯ  ಜ್ಞಾನವೂ ಶಿವಕುಮಾರ್ ಅವರಿಗೆ ಇಲ್ಲದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಯುಕ್ತರು ಯಾವಾಗಲೂ ಚಾಲಕರ ವಿರೋಧಿ ಕೆಲಸ ಮಾಡುವುದರಿಂದ ಕೂಡಲೇ ಇವರನ್ನು ಸಾರಿಗೆ ಇಲಾಖೆಯಿಂದ  ವರ್ಗಾವಣೆ ಮಾಡಿ ಆದೇಶಿಸ ಬೇಕೆಂದು ಹಾಗೂ ಸಚಿವರ ಮಾತಿಗೂ ಬೆಲೆ ಕೊಡದೆ ತಮ್ಮಿಷ್ಟಕ್ಕೆ  ಬಂದಂತೆ ನಡೆದುಕೊಳ್ಳುತ್ತಿರುವ ಸಾರಿಗೆ ಇಲಾಖೆಯ ಶಿವಕುಮಾರ್ ಅವರ ಧೋರಣೆಯನ್ನು ಚಾಲಕರ  ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಸದಾನಂದ ಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.