ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ
ಮುಧೋಳ 15: ಜಿಲ್ಲಾ ಪಂಚಾಯತ್ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಧೋಳ ಹಾಗೂ ಕೆಎಲ್‌ಇ ಸಂಸ್ಥೆಯ ಡಿಪ್ಲೋಮಾ ಕಾಲೇಜು ಮತ್ತು ಎಸ್‌ಸಿಪಿ ಪ್ರೌಢಶಾಲೆ ಮಹಾಲಿಂಗಪುರ ಇವರ ಸಂಯುಕ್ತ ಆಶ್ರಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕುರಿತು ಪ್ರೇರಣಾ ಶಿಬಿರವನ್ನು ಮಹಾಲಿಂಗಪುರದ ಡಿಪ್ಲೋಮಾ ಕಾಲೇಜಿನ ಸಭಾ ಭವನದಲ್ಲಿ ದಿ. 16 ಸೋಮವಾರದಂದು ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಸ್ ಐ ಕುಂದಗೋಳ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಮ್ ಮುಲ್ಲಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ ಹಾಗೂ ಕಾರ್ಯಕ್ರಮಕ್ಕೆ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಸಂಗಮೇಶ್ ನೀಲಗುಂದ್ ರವರು ಭಾಗವಹಿಸಲಿದ್ದಾರೆ.
ಉಪನ್ಯಾಸಕರಾದ ಶಿವಲಿಂಗ ಸಿದ್ನಾಳ ಹಾಗೂ ಕೆಎಲ್‌ಇ ಪ್ರೌಢಶಾಲೆಯ ವಿಜ್ಞಾನ ಗುರುಮಾತೆ ಸಪ್ನಾ ಅನಿಗೋಳರವರು ವಿದ್ಯಾರ್ಥಿಗಳೇ ಪರೀಕ್ಷೆಗೆ ಸಿದ್ಧರಾಗಿ, ಪರೀಕ್ಷಾ ಭಯ ನಿವಾರಣೆ, ಮನೋಬಲ ಹೆಚ್ಚಿಸುವ ಬಗ್ಗೆ, ವಿಶೇಷ ನೈಪುಣ್ಯ ಕೌಶಲ್ಯ, ಹಾಗೂ ಹೆಚ್ಚು ಅಂಕಗಳಿಸುವ ಬಗ್ಗೆ ಪ್ರೇರಣಾ ನುಡಿಗಳನ್ನು ಆಡಲಿದ್ದಾರೆ.
ಈ ಪ್ರೇರಣಾ ಶಿಬಿರಕ್ಕೆ 19 ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ ಎಂದು ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಸ್ ಐ ಕುಂದಗೋಳ ರವರು ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ನೋಡಲ್ ಅಧಿಕಾರಿ ಸಂಗಮೇಶ್ ನೀಲಗುಂದ, ಕೆ ಎಲ್‌ಇ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ ಎನ್ ಅರಕೇರಿ, ಮಹಾಲಿಂಗಪುರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಧನಂಜಯ್ ಕುಲಕರ್ಣಿ, ದೈಹಿಕ ಶಿಕ್ಷಕ ಎಂಎಸ್ ಮಲಾಬದಿಯವರು ಹಾಜರಿದ್ದರು.