ಅಮ್ಮ ನಮ್ಮನ್ನು ಕಂಕುಳಲ್ಲಿ ಹೊರೋದು, ನಾನು ನೋಡೋದನ್ನು ನನ್ನ ಮಗನೂ ನೋಡಲಿ ಎನ್ನುವ ಉದ್ದೇಶಕ್ಕೆ : ಅಪ್ಪ ನಮ್ಮನ್ನು ಹೆಗಲ ಮೇಲೆ ಹೊರೋದು, ನಾನು ನೋಡದೇ ಇರುವುದನ್ನು ಸಹ ನನ್ನ ಮಗ ನೋಡಲಿ ಎನ್ನೋದಕ್ಕೆ...!

ನಾನು ಪ್ರತಿವಾರ ಏನಾದರು ಬರೀಬೇಕು. ಏನಾದರೂ ಹೊಸದನ್ನು ತಮ್ಮ ಜೊತೆ ಹಂಚಿಕೊಳ್ಳಬೇಕು. ನಾನು ತಿಳಿದುಕೊಂಡಿದ್ದನ್ನು ತಮಗೆ ತಿಳಿಸಬೇಕು ಎಂದು ಹಂಬಲಿಸಿ ಹೊಸತಾದ ವಿಷಯವನ್ನು ಹಿಡಿದುಕೊಂಡು ತಮ್ಮೆದುರು ಹಾಜರಾಗುತ್ತೇನೆ. ಭಾವನೆಗಳನ್ನು ಅಕ್ಷರಗಳ ರೂಪದಲ್ಲಿ ಪೋಣಿಸಿ ಅಂಕಣದ ರೂಪದಲ್ಲಿ ತಮ್ಮೆದುರು ಕಟ್ಟಿಕೊಡುತ್ತೇನೆ. ಹಾಗೆಯೇ ಈ ವಾರವೂ ಯಾವುದೋ ಒಂದು ವಿಭಿನ್ನವಾದ ವಿಚಾರವನ್ನು ಎತ್ತಿಕೊಂಡು ತಮ್ಮೆದುರು ಬರಬೇಕು ಎಂದು ತಯಾರಾಗಿದ್ದೆ. ಆದರೆ ಅಷ್ಟರಲ್ಲಿ ನನ್ನ ಗೆಳೆಯ “ಏ ನಾಳೆ ಅಪ್ಪಂದಿರ ದಿನ ಅಂತೆ ನೋಡೋ” ಎಂದು ಹೇಳಿದ. ಅಲ್ಲಿಗೆ ಯಾಕೋ ಈ ಬಾರಿ ಬರೆಯಬೇಕು ಎಂದುಕೊಂಡ ವಿಚಾರ ಬರೆಯುವುದಕ್ಕೆ ಮನಸಾಗಲೇ ಇಲ್ಲ. ಸರಿ ಬಿಡು ಹಾಗಾದರೆ ಈ ಬಾರಿ ಅಪ್ಪಂದಿರ ಕುರಿತಾಗಿಯೇ ಏನದರು ಬರೆದು ಬಿಡೋಣ ಎಂದುಕೊಂಡು ಲ್ಯಾಪ್‌ಟಾಪ್ ಆನ್ ಮಾಡಿ ಕೀ ಬೋರ್ಡ ಮೇಲೆ ಕೈ ಆಡಿಸಿದರೂ ಒಂದೇ ಒಂದು ಶಬ್ದವೂ ಬೆರಳ ತುದಿಯಿಂದ ಮುದ್ರಣವಾಗುವುದಕ್ಕೆ ಒಪ್ಪುತ್ತಿಲ್ಲ. ಒಪ್ಪುತ್ತಿಲ್ಲ ಅನ್ನುವುದೇನಿದೆ ಬರೆಯುತ್ತೇನೆ ಎಂದರೂ ಒಂದೇ ಒಂದು ಶಬ್ದ ಬರುತ್ತಿಲ್ಲ. ಏನು ಬರೆಯಲಿ ಅಪ್ಪನ ಕುರಿತು ಎಲ್ಲವನ್ನು ಕೊಡಬಲ್ಲ ಆ ಅಕ್ಷಯ ಪಾತ್ರೆಯನ್ನು ಅದ್ಯಾಕೋ ನಾವು ಅರ್ಥ ಮಾಡಿಕೊಳ್ಳದೇ ಹೋದೆವಲ್ಲ ಎನ್ನುವ ಭಾವನೆ ಮೆಲ್ಲನೆ ನನ್ನನ್ನು ಕೆಣಕಲು ಪ್ರಾರಂಭಿಸಿತು. ಎಲ್ಲರಿಗೂ ಬರೀ ತಾಯಿಂದಲೇ ಎಲ್ಲ ಎನ್ನುವ ಭಾವ. ಆದರೆ ತಂದೆ ಇಲ್ಲದೆ ತಾಯಿ ಎಲ್ಲಿಂದ ಬರಲು ಸಾಧ್ಯ ಎನ್ನುವ ವಿಚಾರ ನಮ್ಮ ಗಮನಕ್ಕೆ ಬರೋದೇ ಇಲ್ಲ. ಅದಕ್ಕೆ ಅನ್ನಸ್ತು ಅಪ್ಪನ ಬಗ್ಗೆ ಬರೆಯೋ ಮುನ್ನ ಅಪ್ಪನನ್ನು ಅರಿಯಬೇಕು ಎಂದು. ಅದಕ್ಕೆ ಬರವಣಿಗೆಯನ್ನು ಅಲ್ಲಿಗೆ ನಿಲ್ಲಿಸಿದೆ. ಆದರೂ ಅಪ್ಪನ ಬಗ್ಗೆ ಏನಾದರೂ ನಾನು ಹೇಳಲೇ ಬೇಕು. ಇಲ್ಲದೇ ಹೋದಲ್ಲಿ ಮನಸ್ಸಿಗೆ ಕಸಿವಿಸಿ ಎನಿಸುತ್ತದೆ ಏನು ಮಾಡಲಿ ಎನಿಸಿದಾಗ ‘ನಾನು’ ಎನ್ನುವ ಶೀರ್ಷಿಕೆಯ ಪುಸ್ತಕಕ್ಕಾಗಿ ನಾನು ಬರೆದಿದ್ದ ಲೇಖನ ನೆನಪಾಯಿತು. ಆ ಪುಸ್ತಕದ ಈ ಲೇಖನ ಓದಿದ ಮೇಲೆ ಅದೆಷ್ಟೋ ಜನರು ಕಣ್ಣೀರು ಹಾಕುತ್ತ ನನ್ನೆದುರು ಮಾತನಾಡಿದ್ದರು. ಎಷ್ಟೋ ಜನರು ಅಪ್ಪನ ಬಗ್ಗೆ ತಾವಂದುಕೊಂಡ ನಿಲುವನ್ನು ಬದಲಿಸಿಕೊಂಡು ಬಿಟ್ಟಿದ್ದರು. ಎಷ್ಟೋ ಜನರು ನಾವೇಕೆ ಹೀಗೆ ಮಾಡಿದೆವು ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಸಂಕಟ ಪಟ್ಟಿದ್ದರು. ಅದೆಲ್ಲ ನೆನಪಾದ ಮೇಲೆ ಅದೇ ಲೇಖನವನ್ನು ನಿಮ್ಮೆದುರಿಗೆ ಅಂಕಣ ರೂದಪಲ್ಲಿ ತಂದರಾಯಿತು ಎಂದುಕೊಂಡು ಬರೆದಿದ್ದೇನೆ. ಇದು ಕೇವಲ ನನ್ನ ಭಾವನೆಯಲ್ಲ. ತಮ್ಮ ಭಾವನೆಯೂ ಆಗಿರುತ್ತದೆ. ಇಲ್ಲಿ ಕೇವಲ ನನ್ನ ಅಪ್ಪನಲ್ಲ ತಮ್ಮ ಅಪ್ಪನು ಎದುರಾಗುತ್ತಾನೆ. ಬರೆದವನು ನಾನಾದರೂ ಓದಿದ ನೀವೆಲ್ಲರೂ ನಿಮ್ಮಲ್ಲೇ ಪ್ರಶ್ನೆ ಮಾಡಿಕೊಳುತ್ತೀರಿ ಎನ್ನುವ ಭಾವನೆಯಲ್ಲಿ ಬರೆದ ಲೇಖನ ಇನ್ನು ಓದಿ. 

ಬರೆಯಬೇಕು, ನನ್ನಲ್ಲಿನ ಭಾವನೆಗಳನ್ನು ಹೊರ ಹಾಕಬೇಕು ಎಂದು ಅದೇಷ್ಟೊ ಬಾರಿ ಪ್ರಯತ್ನಿಸಿ ಬರೆಯಲಾಗದೆ ಸುಮ್ಮನಾಗಿಬಿಟ್ಟಿದ್ದೆ. ಆದರೆ ಇಂದು ಬರೆಯಬೇಕು ಎನ್ನಿಸಿದ್ದನ್ನು ಬರೆದಿದ್ದೇನೆ. ಆದರೆ....! ನಾನಿದನ್ನು ಬರೆದು ಮುಗಿಸುವುದರೊಳಗೆ ನಾನೇ ಸಂಪೂರ್ಣವಾಗಿ ಕಣ್ಣಿರಾಗಿಬಿಟ್ಟಿದ್ದೆ. ಬರೆಯುತ್ತಿರುವ ಪದಗಳೆಲ್ಲ ಕಣ್ಣ ಹನಿಗಳಲ್ಲಿ ಕೊಚ್ಚಿ ಹೋಗುತ್ತಿದ್ದವು. ಉಕ್ಕುತ್ತಿದ್ದ ಮನಸ್ಸಿನ ಭಾವನೆಗಳು ಬಿಕ್ಕಿ- ಬಿಕ್ಕಿ ಅಳುವಂತೆ ಪ್ರೇರೆಪಿಸುತ್ತಿದ್ದವು. ಅವತ್ತು ಅವನು ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಬಂದಿದ್ದ, ಮನೆಗೆ ಬಂದ ಮಗ ಅಮ್ಮನ ಎದುರಿಗೆ ಆ ವಿಷಯ ಹೇಳಿದಾಗ ಅಮ್ಮ ಸಿಹಿ ತಿನ್ನಿಸಿ ಸಂಭ್ರಮ ಪಟ್ಟಳು. ಆದರೆ ಅಲ್ಲೊಬ್ಬ ವ್ಯಕ್ತಿ ಇದನ್ನು ಕೇಳಿಯೂ ಯಾವುದೆ ಪ್ರತಿಕ್ರಿಯೆ ತೋರದೆ ಸುಮ್ಮನೆ ನಿಂತಿದ್ದ. ಅಂದು ಅಕ್ಕನ ಮದುವೆಯಾಯಿತು. ಅಕ್ಕ ಭಾವನ ಮನೆಗೆ ಹೊರಟು ನಿಂತಿದ್ದಳು, ಮನೆಯಲ್ಲಿ ಎಲ್ಲರ ಕಣ್ಣಂಚಲ್ಲೂ ನೀರಿತ್ತು. ಆದರೆ ಆ ವ್ಯಕ್ತಿ ದೂರದಲ್ಲಿ ಸುಮ್ಮನೆ ನಿಂತು ನೋಡುತ್ತಿದ್ದ. ಅಂದು ಶಾಲೆಗೆ ಪ್ರಥಮ ಬಂದ ದಿನ ಸಂಜೆ; ಆಗ ಸುಮ್ಮನೆ ನಿಂತಿದ್ದ ಆ ವ್ಯಕ್ತಿ ಅಲ್ಲಿ ತನ್ನ ಗೆಳೆಯರಿಗೆಲ್ಲ ಸಿಹಿ ತಿನ್ನಿಸಿ ಸಂತಸ ಪಡುತ್ತಿದ್ದ. ಅಕ್ಕ ಭಾವನ ಮನೆಗೆ ಹೊರಟಾಗ ಸುಮ್ಮನೆ ದೂರ ನಿಂತಿದ್ದ ವ್ಯಕ್ತಿ ಹಿಂತಿರುಗಿ ಹೋದಾಗ ಹಿಂಬಾಲಿಸಿ ನೋಡಿದರೆ ಮನೆಯ ಮೂಲೆಯಲ್ಲಿನ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಮತ್ಯಾರಾದರು ನೋಡಬಾರದು ಎಂದುಕೊಂಡು ಕಣ್ಣೊರೆಸಿಕೊಂಡು ಏನೂ ನಡದೆ ಇಲ್ಲ ಅನ್ನೊ ಹಾಗೆ ಜನರ ಮಧ್ಯದ ಗುಂಪಿನಲಿ ಸೇರಿಕೊಂಡ, ತೇವಗೊಂಡ ಕಣ್ಣುಗಳು ಅಗಲಿಕೆಯ ನೋವನ್ನು ಹೊರ ಹಾಕುತ್ತಿದ್ದವು. ಮನೆಯಲ್ಲಿ ಎಲ್ಲ ಬಾಂಧವ್ಯಗಳನ್ನು ತೊರೆದು ಹೊರಟ ಅಕ್ಕನ ಮುಖವನ್ನು ನೋಡಲಾಗದೆ ಆ ವ್ಯಕ್ತಿ ಅಮ್ಮನನ್ನು ನೋಡುತ್ತಿದ್ದ. ಅಲ್ಲಿ ಇಬ್ಬರ ಕಣ್ಣಂಚಲ್ಲಿ ನೀರಿತ್ತು. ದುಃಖ ಉಮ್ಮಳಿಸಿ ಬರುತ್ತಿತ್ತು. ತಡೆಯಲಾರದೆ ಅಮ್ಮ ಅತ್ತು ಬಿಟ್ಟಳು. ಆದರೆ ಆತ ಮಾತ್ರ ಅದನ್ನು ತಡೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದ. ಇಂಥಹ ಆ ವ್ಯಕ್ತಿಯು ಬೇರಾರೂ ಅಲ್ಲ. ಆತ ನನ್ನ ಅಪ್ಪ. 

ಮಗ ಶಾಲೆಗೆ ಪ್ರಥಮ ಬಂದಾಗ ಅಪ್ಪನ ಮನಸ್ಸಿನ ನೂರು ಕಣ್ಣಿನ ಮೈಯೂರ ಗರಿ ಬಿಚ್ಚಿದ್ದ. ಆದರೂ ಅದನ್ನು ತೋರಗೊಡದೆ ಆತ ಸುಮ್ಮನೆ ನಿಂತಿದ್ದ. ಅಮ್ಮನಂತೆ ಕುಣಿದು ಕುಪ್ಪಳಿಸಿದರೆ ಎಲ್ಲಿ ಮಗ ಅಡ್ಡ ದಾರಿ ಹಿಡಿಯುತ್ತಾನೇನೊ ಎಂಬ ಭಯದಿಂದ ಆಗ ಯಾವ ಪ್ರತಿಕ್ರಿಯೆಯನ್ನು ನೀಡದ ಆ ಮಹಾ ಮಾನವ ತನ್ನ ಸ್ನೇಹಿತರಿಗೆ ಈ ವಿಷಯ ಹೇಳಿ ಸಂತಸ ಪಟ್ಟಿದ್ದ. ಅವರಿಗೆಲ್ಲ ಸಿಹಿ ತಿನ್ನಿಸಿ ತಾನು ಸಿಹಿಕನಸುಗಳನ್ನು ಕಟ್ಟಿಕೊಂಡು ಮನೆಗೆ ಬಂದಿದ್ದ. ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೊರಟ ಸಂದರ್ಭದಲ್ಲಿ ಎಲ್ಲರಂತೆ ತಾನು ಅತ್ತರೆ ಎಲ್ಲರ ಧೈರ್ಯ ಉಡುಗಿ ಹೋಗಬಹುದು, ತನ್ನ ಮಗಳು ಮತ್ತಷ್ಟು ಕಣ್ಣೀರು ಹಾಕಬಹುದು ಎಂದು ಸುರಿಯಲು ಹಂಬಲಿಸುತ್ತಿದ್ದ ಕಣ್ಣೀರನ್ನು ತಡೆದು ನಿಲ್ಲಿಸುವ ಕಾರ್ಯ ಮಾಡುತ್ತಲಿದ್ದ. ಅಂಥ ಆಗಸದಗಲ ಮನಸ್ಸಿನ, ಸಾಗರದಗಲ ಪ್ರೀತಿಯ, ಪ್ರಪಂಚದಗಲ ಪ್ರೇಮದ ಮೂರ್ತಿ ಅಪ್ಪನಲ್ಲದೆ ಬೇರಾರು ಆಗಲು ಸಾಧ್ಯವಿಲ್ಲ. 

ಇತ್ತೀಚೆಗೆ ಮಾಧ್ಯಮಗಳಲ್ಲಿ ಒಂದು ಗೀತೆ ಪ್ರಸಾರವಾಗುತ್ತಿದೆ. ಡೌನ್‌ಲೋಡ ಖಾತೆಯಲ್ಲಿ ತನ್ನದೆ ಆದ ರಾ​‍್ಯಂಕಿಂಗ್‌ನ್ನು ಉಳಿಸಿಕೊಂಡು ಹೋಗುತ್ತಿದೆ. ಕೇಳುಗರನ್ನೆಲ್ಲ ಅಭಿಮಾನಿಯಾಗುವಂತೆ ಮಾಡುತ್ತಿದೆ ಮತ್ತೆ ಮತ್ತೆ ಕೇಳಬೇಕು ಎನ್ನುವ ಭಾವ ಮೂಡುವಂತೆ ಮಾಡುತ್ತಿದೆ. ಕೇಳುತ್ತ ಕುಳಿತವನ ಕಣ್ಣಾಲೆಗಳು ಹಾಗೆ ತುಂಬಿ ಬಂದು ಕಣ್ಣೀರ ರೂಪದಲ್ಲಿ ಕೆನ್ನೆಗೆ ಜಾರುತ್ತಿದ್ದರು ಗೊತ್ತಾಗದಷ್ಟು ಭಾವ ಸಾಗರದ ಆಳಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಅಪ್ಪನ ಹಲವು ರೂಪಗಳಲ್ಲಿ ಚಿತ್ರಿಸಿ ಡಾ.ನಾಗೇಂದ್ರ ಪ್ರಸಾದ ರಚಿಸಿದ ಗೀತೆಯ ಸಾಲುಗಳು ಒಂದೆಡೆಯಾದರೇ, ಕೇಳುಗನೆದೆಯಲ್ಲಿ ಭಾವನೆಗಳ ಸುನಾಮಿ ಅಪ್ಪಳಿಸುವಂತೆ ಅನುರಾಧಾ ಭಟ್ ಹಾಡಿದ್ದಾರೆ. ಆ ಹಾಡಿನಲ್ಲಿನ ಭಾವನೆಗಳೇ... ನನ್ನನ್ನು ಈ ಲೇಖನ ಬರೆದು ಮುಗಿಸಲು ಪ್ರೇರಣೆ ನೀಡಿದ್ದು. ಆ ಗೀತೆಯೆ.....! 

“ನಾನು ನೋಡಿದ ಮೊದಲ ವೀರ 

ಬಾಳು ಕಲಿಸಿದ ಸಲಹೆಗಾರ 

ಬೆರಗು ಮೂಡಿಸೊ ಜಾದುಗಾರ ಅಪ್ಪ 

ಹಗಲು ಬೆವರಿನಾ ಕೂಲಿಕಾರ 

ರಾತ್ರಿ ಮನೆಯಲಿ ಚೌಕಿದಾರ 

ಎಲ್ಲ ಕೊಡಿಸುವ ಸಾಹುಕಾರ ಅಪ್ಪ 

ಗದರೋ... ಮಿಸೆಕಾರ ಮನಸೇ.... ಕೋಮಲ 

ನಿನ್ನಾ ಹೋಲೊ ಕರ್ಣ ಯಾರಿಲ್ಲ 

ಅಪ್ಪಾ....! ಐ ಲವ್ ಯು ಪಾ” 

ಅಪ್ಪ ಎನ್ನವ ಎತ್ತಿಗೆ, ಅಮ್ಮ ಅನ್ನುವ ನೊಗ ಕಟ್ಟಿಕೊಂಡು, ಸಂಸಾರ ಎನ್ನುವ ನೇಗಿಲನ್ನು ಎಳೆಯುತ್ತ, ಮಕ್ಕಳು ಎನ್ನುವ ಫಲ ಪಡೆದು, ನೆಮ್ಮದಿಯಾಗಿರಲು ಬದುಕು ಎನ್ನುವ ಹೊಲವನ್ನು ಉತ್ತವನು, ಬಿತ್ತವನು ಅವನೆ. ಒಂದು ವೇಳೆ ಆ ಮಹಾತ್ಮನೆ ಇಲ್ಲದೆ ಹೋಗಿದ್ದರೆ ನಾವುಗಳು ಇರುತ್ತಿದ್ದೆವಾ ಎನ್ನುವ ಪ್ರಶ್ನೆಗೆ ಉತ್ತರ ಎಂದರೆ ಅದು ಕೇವಲ ಇಲ್ಲ.......ಇಲ್ಲ......ಮತ್ತು ಇಲ್ಲ. ಅದರ ಹೊರತು ಅನ್ಯ ಉತ್ತರವೇ ಇಲ್ಲ. ಕಾರಣ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಸೃಷ್ಠಿಯಾದ ಸಾವಿರಾರು ಪ್ರಶ್ನೆಗೆ ಉತ್ತರವಾದವನು. ಕಲಿಕೆಯ ಸಮಯದಲ್ಲಿ ಗುರುವಾದವನು, ನಡೆಯುವ ಕತ್ತಲ ದಾರಿಗೆ ಬೆಳಕಾದವನು, ನಮ್ಮ ಹಸಿವಿಗೆ ಆಹಾರವಾದವನು, ನಮ್ಮ ಕಣ್ಣೀರು ಒರೆಸಲು ಕೈಯಾದವನು, ನಮ್ಮ ಮುಂದಿನ ದಾರಿಗೆ ದಿಕ್ಸೂಚಿಯಾದವನು, ನಮ್ಮ ಸಾಧನೆಯ ಹೆಗಲಿಗೆ ಹೆಗಲಾದವನು, ಇಳಿ ವಯಸ್ಸಿನಲ್ಲಿಯೂ ನಮಗಾಗಿ ಕಾಯುವವನು, ನಮ್ಮ ಗೆಲುವನ್ನೆ ತನ್ನದೆಂದು ಸಂಭ್ರಮಿಸುವವನು ಎಲ್ಲವೂ ಅಪ್ಪ ಎನ್ನುವ ಮಾಂತ್ರಿಕನ ರೂಪದಲ್ಲಿಯೆ ಇದೆ. ತಾನು ಉಪವಾಸವಿದ್ದುದ್ದನ್ನು ತೋರದ ಅಪ್ಪ ನಮ್ಮ ಹೊಟ್ಟೆ ತುಂಬಿಸುತ್ತಾನೆ. ತನ್ನ ಕಣ್ಣೀರು ತೋರಿಸದ ಅಪ್ಪ ನಮ್ಮ ಕಣ್ಣೀರು ಒರೆಸುತ್ತಾನೆ. ತನ್ನ ನೋವನ್ನು ಬಚ್ಚಿಟ್ಟ ಅಪ್ಪ ನಮ್ಮ ನೋವನ್ನು ಮರೆಸುತ್ತಾನೆ. ತ್ಯಾಗಕ್ಕೆ ತಾಯಿ ಎಂದು ಕರೆಯುತ್ತೇವೆ, ತವರನ್ನು ತಾಯಿಯಿಂದಲೇ ಗುರುತಿಸುತ್ತೇವೆ. ಆದರೆ ತಾಯಿ ಮಾತ್ರ ತವರಲ್ಲ. ತಂದೆ ಇರದೇ ತಾಯಿಲ್ಲ. ಎಲ್ಲಕ್ಕೂ ಮೂಲ ಕರ್ತೃ, ಕರ್ಮ, ಕ್ರಿಯಾ ಎಲ್ಲವು ಅವನೆ.   

ನಮಗಾಗಿ ಹಗಲಿರುಳು ಅನ್ನದೆ ಕಾಲಿಗೆ ಚಕ್ರಕಟ್ಟಿಕೊಂಡು ತಿರುಗಿದವನು ಅಪ್ಪ. ತನ್ನ ಬೇವರ ಹನಿಯಲ್ಲಿಯೆ ನಮಗೆ ಅನ್ನ ನೀಡಿದವನು ಅಪ್ಪ. ನಮ್ಮ ನಗುವಲ್ಲಿಯೆ ಎಲ್ಲ ಮರೆತವನು ಅಪ್ಪ. ಯಾವ ಪ್ರತಿಫಲ ಬಯಸದ ನಿಷ್ಕಾಮ ಕರ್ಮಿ ಎಂದರೆ ಅದು ಅಪ್ಪ ಮಾತ್ರ. ಬೆಳದ ಮಗ ನನ್ನನ್ನು ನೊಡಿಕೊಳ್ಳಲಿ ಎನ್ನುವ ಇರಾದೆ ಯಾವ ತಂದೆಗೂ ಇರುವುದಿಲ್ಲ. ನನ್ನ ಕಣ್ಣೆದುರು ನನ್ನ ಮಗ ಚೆನ್ನಾಗಿರಲಿ ಎನ್ನುವ ಭಾವನೆಯ ಹೊರತು ಅನ್ಯದರ ಬಗ್ಗೆ ವಿಚಾರವು ಮಾಡದ ಮುಗ್ದ ಮಾನವ ಅಂದರೆ ಅದು ಅಪ್ಪ ಮಾತ್ರ. ‘ನಾನು ಕೂಲಿ ಆಳಾಗಿ ಮಾಲೀಕನ ಕೈ ಕೆಳಗೆ ದುಡಿಯುತ್ತೇನೆ. ನನ್ನ ಮಗ ಹಾಗಾಗುವುದು ಬೇಡ, ನನ್ನಂತ ನೂರಾರು ಜನರಿಗೆ ಕೆಲಸ ಕೊಡುವಂತವನಾಗಲಿ’ ಎನ್ನುವ ಕನಸಿನಿಂದ ಊಟ ಬಿಟ್ಟು, ಹರಿದ ಬಟ್ಟೆ ತೊಟ್ಟು, ಕಾಲಲ್ಲಿ ಕಿತ್ತು ಹೋಗಿರುವ ಚಪ್ಪಲಿ ಮೆಟ್ಟು. ಕಣ್ಣಲ್ಲಿ ಮಕ್ಕಳ ಭವಿಷ್ಯದ ಕನಸ್ಸು ಮಾತ್ರ ಬೆಟ್ಟದಷ್ಟು. ಹೀಗೆ ತನ್ನ ಪರಿವೆ ಇಲ್ಲದೆ ಬದುಕಿ ಬಿಡುತ್ತಾನೆ. ಇಳಿ ಸಂಜೆ ವಯಸ್ಸಿನಲ್ಲೂ ತನಗೆ ಬಂದ ಪೆನ್‌ಶೆನ್ ಸಹ ಮಗನಿಗೆ ನೀಡುವ ತಂದೆಗಿಂತ ದೊಡ್ಡ ಕರ್ಣ ಈ ಜಗತ್ತಿನಲ್ಲಿ ಯಾರೂ ಇರಲು ಸಾಧ್ಯವಿಲ್ಲ. ಕರ್ಣ ಎನ್ನುವ ಪಾತ್ರವನ್ನು ನಾವು ಕೇವಲ ಮಹಾಭಾರತದಲ್ಲಿ ಮಾತ್ರ ನೋಡುತ್ತೇವೆ. ಆದರೆ ವಾಸ್ತವದಲ್ಲಿ ಅಪ್ಪನನ್ನು ಮೀರಿಸುವ ದಾನಶೂರ ಮತ್ತೊಬ್ಬನಿರಲು ಸಾಧ್ಯವೇ ಇಲ್ಲ. ಅಪ್ಪ ಮೊಗೆದಷ್ಟು ಉಕ್ಕುವ ಸಾಗರ. ಉಜ್ಜಿದಷ್ಟು ಹೊಳೆಯುವ ಬಂಗಾರ. ಬದುಕೆಂಬ ವೀಣೆಯ ಝೇಂಕಾರ. ಹಣವಿರದ ಪ್ರೀತಿಯ ಸಾಹುಕಾರ. ಮನಸ್ಸು ಮಾತ್ರ ನಿರ್ವಿಕಾರ. ಅವನೆ ನಮ್ಮನ್ನು ನಗಿಸುವ ಕಲಾಕಾರ. ಅವನೇ ಬಾಳಿಗೆ ಮಮಕಾರ.    

ಆಧುನಿಕ ಜಗತ್ತಿನೆಡೆಗೆ ಮುಖ ಮಾಡಿ ನಿಂತ ನಾವು; ನಮ್ಮೇಳ್ಗೆಗಾಗಿ ಮೇಣದಂತೆ ಜೀವನ ಸವೆಸಿದ ಅಪ್ಪನನ್ನು ಇಳಿವಯಸಿನಲ್ಲಿ ಬಿಟ್ಟು  ಜೀವನ ಅರಸಿ ಹೊರುಡುತ್ತೇವೆ. ನಮ್ಮ ಜೀವನ ನಿರ್ಮಾಣಕ್ಕಾಗಿ ತನ್ನ ಜೀವನವನ್ನೆ ಸವೆಸಿದ ಆಕಾಶದಗಲ ವ್ಯಕ್ತಿತ್ವದ ಅಪ್ಪನನ್ನು ಮರೆಯುತ್ತೆವೆ. ಆದರೆ ಕಟುವಾಸ್ತವ ಒಂದಿದೆ. ಅದನ್ನು ನಾವು ಮರೆತಿದ್ದೇವೆ. ಇಂದು ಮಗನಾಗಿರುವ ನಾವುಗಳು ಮುಂದೊಂದು ದಿನ ಅಪ್ಪನಾಗುತ್ತೇವೆ ಆಗ ನಮಗೆ ನಾವು ಮಾಡಿದ ತಪ್ಪಿನ ಅರಿವಾಗುತ್ತದೆ. ಆದರೆ ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿರುತ್ತದೆ.  ತನ್ನೆದೆಯ ಮೇಲೆ ನಮ್ಮನ್ನು ಮಲಗಿಸಿಕೊಂಡು ಚಂದಮಾಮನನ್ನು ತೋರಿಸಿದ ಅಪ್ಪ, ಅಕ್ಕರೆಯ ಕೈಗಳಿಂದ ಹೆಜ್ಜೆ ಇಡಲು ಪ್ರೇರೇಪಿಸುತ್ತಿದ್ದ ಅಪ್ಪ, ಮಕ್ಕಳ ಪ್ರೀತಿ ಎದುರು ಪ್ರಪಂಚವನ್ನೆ ಮರೆಯುತ್ತಿದ್ದ ಅಪ್ಪ, ನಾನು ಮಾಡುವುದೆಲ್ಲ ನನ್ನ ಮಕ್ಕಳಿಗಾಗಿಯೆ ಅನ್ನುತ್ತಿದ್ದ ಅಪ್ಪ, ಕಣ್ಣಲ್ಲಿ ಕಣ್ಣಿಟ್ಟು ಸಲಹುತ್ತಿದ್ದ ಕರುಣಾಮಯಿ ಅಪ್ಪ, ಖಾಲಿ ಮನಸ್ಸಿನಲ್ಲಿಯೂ ಕನಸುಗಳನ್ನು ಬಿತ್ತುತ್ತಿದ್ದ ಅಪ್ಪ, ಅಕ್ಕರೆಯ ಮಾತುಗಳಲ್ಲಿ ಸಕ್ಕರೆಯನು ಹಂಚುತ್ತಿದ್ದ ಅಪ್ಪ, ಕಷ್ಟಗಳು ನಮ್ಮಕ್ಕಪಕ್ಕ ಸುಳಿಯದಂತೆ  ಕಾಯುತ್ತಿದ್ದ ಅಪ್ಪ ಇಂದೇಕೆ ಬೆಳೆದ ಮಕ್ಕಳ ಕಣ್ಣಿಗೆ ಕಾಣುತ್ತಿಲ್ಲ ಎನ್ನುವುದೆ ತಿಳಿಯುತ್ತಿಲ್ಲ. ಪ್ರತಿ ಕ್ಷಣವು ನಮ್ಮ ಜೀವನದ ಉನ್ನತಿಗಾಗಿ ಮೆಟ್ಟಿಲಾಗುತ್ತಿರುವ ಅಪ್ಪನ ಮನಸ್ಸಿಗೆ ಘಾಸಿ ಮಾಡುವ ನಾವುಗಳು ಯಾವ ಹಾದಿಯಲ್ಲಿ ಸಾಗುತ್ತಿದ್ದೇವೊ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ.  

ಹೌದು ಆತ ನಮ್ಮ ಬಾಳಿನ ಏಳ್ಗೆಗೆ ಶ್ರಮಿಸುತ್ತಾನೆ. ನನ್ನ ಮಕ್ಕಳು ಸಾಧನೆ ಮಾಡಲಿ, ಜಗತ್ತನ್ನೇ ಮೆಟ್ಟಿ ನಿಲ್ಲಲಿ ಎಲ್ಲರೂ ಅವರನ್ನು ಕಂಡು ಭಲೆ ಭಲೆ ಎನ್ನಲಿ ಎನ್ನುವುದು ಆತನ ಕನಸು. ಆ ಕನಸಿಗೆ ಒಂದೊಂದೆ ರೆಕ್ಕೆ ಪುಕ್ಕ ಸೇರಿಸಿಕೊಂಡು ಆಕಾಶಕ್ಕೆ ಹಾರುವ ಕನಸು ಕಾಣುತ್ತಾನೆ. ಆದರೆ ಚಿಕ್ಕ ವಯಸ್ಸಿನಲ್ಲಿ ಮಡಿಲಲ್ಲಿ ಎದೆಗೆ ಒದೆಯುತ್ತಿದ್ದ ಮಗುವಿನ ಪುಟ್ಟ ಪಾದಗಳ ಸ್ಪರ್ಷ ಅಪ್ಪನಿಗೆ ಮುದ ನೀಡುತ್ತಿತ್ತು. ಆದರೆ ಇಂದು ಬೆಳೆದ ಮಗನ ಬಿರುಸಾದ ಒರಟು ಕಾಲ್ಗಳು ಅಪ್ಪನನ್ನು ಒದ್ದು, ಅವನ ಕನಸುಗಳನ್ನು ತುಳಿಯುತ್ತಿರುವಾಗ ಆ ಅಪ್ಪನ ಸ್ಥಿತಿ ಹೇಗಾಗಿರಬೇಡಾ ಹೇಳಿ? ದುಡಿದು ದುಡಿದು ಕೃಷವಾದ ಶರೀರ ಹೊತ್ತುಕೊಂಡು ನಾಳೆಯ ದಿನಗಳಲ್ಲಿ ತನ್ನ ಮಗನ ಪ್ರೀತಿಯಲ್ಲಿ ಮೈ ಮರೆತು ಬದುಕಬೇಕು ಎಂದುಕೊಂಡವನು ಯಾಕಾದರೂ ಇಂದು ಬದುಕಿದ್ದೇನೋ ಎನ್ನುವ ಮಟ್ಟದಲ್ಲಿ ಚಿಂತಸಲು ಆರಂಭಿಸುತ್ತಾನೆ. ಅಂದು ಅಂಬೆಗಾಲು ಹಾಕಲು ಬೇಕಾದ ಅಪ್ಪ, ಅಂದು ಕೂಸುಮರಿ ಆಡಿಸಲು ಬೇಕಾದ ಅಪ್ಪ, ಅಂದು ಕಾನ್ವೆಂಟಿಗೆ ಬಿಟ್ಟು ಬರಲು ಬೇಕಾದ ಅಪ್ಪ, ಅಂದು ಜಾತ್ರೆಯನು ತೋರಿಸಲು ಹೆಗಲನ್ನೆ ನೀಡಿದ ಅಪ್ಪ, ಅಕ್ಷರ ತೀಡಿಸಲು ಬೇಕಾದ ಅಪ್ಪ, ಅಕ್ಕರೆ ತೋರಿಸಲು ಬೇಕಾದ ಅಪ್ಪ, ಪೀಸು ಕಟ್ಟಲು ಬೇಕಾದ ಅಪ್ಪ, ಪೋಸು ನೀಡುವ ಮಗನಿಗೆ ಬೈಕು ಕೊಡಿಸಿದ ಅಪ್ಪ, ಪ್ರತಿಕ್ಷಣದ ನಮ್ಮೆಲ್ಲ ಕಾರ್ಯಕ್ಕೂ ಬೇಕಾದ ಸೌಕರ್ಯ ನೀಡಿದ ಅಪ್ಪ ಮಾತ್ರ ಇಂದು ಬೇಕಾಗುವುದಿಲ್ಲ. ರೆಖ್ಖೆ ಬಲಿತ ಮೇಲೆ ಬಿಟ್ಟು ಹೋಗುವ ವಲಸೆ ಹಕ್ಕಿಯ ಹಾಗೆ ಕಲಿತು ಬೆಳೆದ ಮೇಲೆ ಅಪ್ಪನನ್ನು ತೊರೆದು ತನ್ನ ದಾರಿ ತಾನು ನೋಡಿಕೊಂಡು ಹೋಗುವ ಮಕ್ಕಳನ್ನು ನೋಡಿದರೆ ಅಂಥ ಪ್ರೀತಿಯ ಮೂರ್ತಿಗೆ ಮಕ್ಕಳೆ ಇಲ್ಲದಿದ್ದರೇ ಚನ್ನಾಗಿರುತ್ತಿತ್ತೇನೊ ಅನ್ನಿಸುತ್ತದೆ. 

ಪ್ರತಿಕ್ಷಣದ ಜೀವನ ಪಯಣದಲ್ಲಿ ಜೊತೆಗಿದ್ದು ಕಾಯುವ ಅಪ್ಪನನ್ನು ಯಾವತ್ತು ಮರೆಯಲಾಗುವುದಿಲ್ಲ. ಎಲ್ಲದಕ್ಕೂ ಕಾರಣ ಅಮ್ಮನೆಂದು ಎದೆಯುಬ್ಬಸಿ ಹೇಳುವ ನಾವುಗಳು ಅಕ್ಕರೆಯ ಅಪ್ಪನನ್ನು ಮರೆಯುತ್ತಿದ್ದೇವೆ. ಅಮ್ಮ ನಮಗೆ ಅನ್ನ ಬೇಯಿಸಿಕೊಟ್ಟಳು, ಅದಕ್ಕೆ ಅಪ್ಪ ಅಕ್ಕಿ ತಂದು ಕೊಟ್ಟಿಲ್ಲವೆ? ಅಮ್ಮ ಕೈ ತುತ್ತು ಕಲೆಸಿ ಕೊಟ್ಟಳು, ಅದನ್ನು ಕಂಡು ಅಪ್ಪ ಖುಷಿ ಪಟ್ಟಿಲ್ಲವೆ? ಅಮ್ಮ ಲಾಲಿ ಹಾಡುವಾಗ ಅಪ್ಪ ಅದರ ಜೊತೆಯಲ್ಲಿ ಗುನುಗುನುಸಿಲ್ಲವೆ? ಅಮ್ಮ ತಲೆ ನೇವರಿಸಿ ಮಲಗಿಸಿದ ಮೇಲೆ ಅಪ್ಪ ಬಂದು ಹಣೆಗೆ ಮುತ್ತನಿತ್ತಿಲ್ಲವೆ? ಇಷ್ಟಲ್ಲ ಮಾಡಿದ ಅಪ್ಪನ ಅಂತರಂಗಕ್ಕೆ ಘಾಸಿ ಮಾಡುವುದು, ಅವನ ಕನಸಿನ ಕೋಟೆಗೆ ಕಲ್ಲು ಹೊಡೆಯುವುದು, ಮನಸ್ಸಿನ ಮನೆಗೆ ಬೆಂಕಿ ಇಡುವುದು ಯಾವ ನ್ಯಾಯ? ಬೆಟ್ಟದಷ್ಟು ಪ್ರೀತಿ ನೀಡಿ; ತಾನು ಮಾತ್ರ ನೆಲದ ಮೇಲೆ ನಿಂತು ನಮ್ಮೇಳ್ಗೆಯನ್ನು ನೋಡುವ ಆ ಕರುಣಾಮಯಿಗೆ ಖುಷಿ ನೀಡುವ ಕಾರ್ಯ ಮಾಡಬೇಕಾಗಿದೆ. ನಮ್ಮ ಬಾಳಿಗೆ ಬೆಳಕು ನೀಡಲು ದೀಪವಾದವನು ಅವನು. ಇಲ್ಲಿ ಉರಿದಿದ್ದು ದೀಪವಾದರೂ ಕರಗಿದ್ದು ಮೇಣ. ಹಾಗೆ ಬೆಳದು ಜಗಬೆಳಗಿದ್ದು ನಾವಾದರು ನಮಗಾಗಿ ಕರಗಿದ್ದು ನಮ್ಮ ಅಪ್ಪ. ಅಮ್ಮನನ್ನು ಅಪ್ಪಿ ಮುದ್ದಾಡುವ ನಾವುಗಳು ಆ ಗದರು ಮೀಸೆಯ ಅಪ್ಪನನ್ನು ಕಂಡಾಗ ಹೆದರಿ ಹಿಂದೆ ಸರಿಯುತ್ತೇವೆ. ಆದರೆ ಆ ಗದರು ಧ್ವನಿಯ ಆತಂತರ್ಯದಲ್ಲಿ ಒಂದು ಸೂಕ್ಷ್ಮ ಕಾಳಜಿ ಇದೆ. ಉರಿ ಕಣ್ಣಿನ ಒಳಗೆ ತಂಪಾದ ಪ್ರೀತಿ ಇದೆ. ಬೈಯೋ ಮಾತಿನ ಒಳಗೆ ಭರವಸೆಯ ಹರಿವಿದೆ. ಅದನ್ನು ಅರಿಯದ ನಾವುಗಳು ಅಪ್ಪ ನಮ್ಮನ್ನು ಬೈಯುತ್ತಾನೆ ಅಂದುಕೊಂಡು ಅವನಿಂದ ದೂರ ಉಳಿಯುವುದು ತರವೆ?.  

ಒಂದು ಬಾರಿ ಅಪ್ಪನನ್ನು ಪ್ರೀತಿಯಿಂದ ಅಪ್ಪಿದರೆ ಸಾಕು ಆ ಆಕಾಶದಗಲ ಮನಸ್ಸಿನ ಮನುಷ್ಯ ನಿಂತ ಜಾಗದಲ್ಲೇ ಮಗುವಾಗಿ ಬಿಡುತ್ತಾನೆ. ಮೊದಲ ಬಾರಿಗೆ ನಿಮ್ಮೆದುರು ನಗುವಾಗಿ ಬಿಡುತ್ತಾನೆ. ಬಿಗಿದಪ್ಪಿದ ತೋಳುಗಳಲ್ಲಿ ಧನ್ಯತೆಯ ಬಿಗಿತ ಕಂಡರೆ; ಮನವೆಂಬ ಮನೆಯಲ್ಲಿ ಸಾರ್ಥಕತೆಯ ಭಾವನೆಯೂ ಸಂಭ್ರಮಿಸುತ್ತದೆ.  ಜೀವನದ ಏಳ್ಗೆಗೆ ಪ್ರತಿಕ್ಷಣವು ಬಾಡಿಗೆ ಎತ್ತಿನಂತೆ ದುಡಿದ ಅಪ್ಪನ ಕೈಯಲ್ಲಿ ಸವೆದ ರೇಖೆಗಳು, ಮುಖದಲ್ಲಿ ಆವರಿಸಿದ ಇಳಿವಯಸ್ಸಿನ ನೆರೆಗಳು, ದುಡಿದು ಕೃಷವಾದ ಶರೀರ. ಈ ಎಲ್ಲದರ ಹಿಂದಿದೆ ನಾನು ಮಾಡಿದ್ದು, ನಾನು ದುಡಿದಿದ್ದು ಸಾರ್ಥಕವಾಯಿತು ಎನ್ನುವ ಭಾವ ತುಂಬಿರುತ್ತದೆ. ವಿದೇಶಿಯ ಸಂಸ್ಕೃತಿಯ ದಾಸರಾಗಿ ಮದರ‌್ಸ ಡೆ, ಫಾದರ​‍್ಸ‌ ಡೆ ಎಂದು ಅಮ್ಮನಿಗೊಂದು ದಿನ, ಅಪ್ಪನಿಗೆ ಒಂದು ದಿನ ಎಂದು ಹಂಚಿಕೆ ಮಾಡಿ ಒಂದು ದಿನ ಕೇಕ್ ತಿನ್ನಿಸಿ ವೃದ್ಧಾಶ್ರಮಕ್ಕಟ್ಟುವ ಕಟುಕ ಮಕ್ಕಳೆದುರು ಇಂಥ ಕರುಣಾಮೂರ್ತಿಯನ್ನು ಒಂದು ಬಾರಿ ಅಪ್ಪಿ ಮನ ಬಿಚ್ಚಿ ಹೇಳಿ, “ಐ ಲವ್ ಯು ಅಪ್ಪ” ಎಂದು. ಅಲ್ಲಿಗೆ ಅಪ್ಪ ಪಟ್ಟ ಎಲ್ಲ ಕಷ್ಟಗಳಿಗೆ ದುಡಿದ ಪ್ರತಿಗಳಿಗೆ ನೀವು ಕೊಟ್ಟ ಕಾಣಿಕೆ ಎಂದು ಕಣ್ಣಾಲೆಗಳನ್ನು ತುಂಬಿಸಿಕೊಂಡು ಬಿಡುತ್ತಾನೆ. ನಾನು ನನ್ನ ಅಪ್ಪನಿಗೆ ಇದೇ ಮಾತು ಹೇಳುತ್ತೇನೆ ನೀವು ಹೇಳಿ “ಅಪ್ಪಾ.... ಐ ಲವ್ ಯು ಪಾ, ಅಪ್ಪಾ..... ಐ ಲವ್ ಯು ಪಾ” ನೀವೇನಂತಿರಾ...? 

- ಮಂಜುನಾಥ ಮ. ಜುನಗೊಂಡ 

ವಿಜಯಪುರ 



- * * * -