ಮಸೀದಿ ನಿರ್ಮಾಣಕ್ಕೆ ಜಾಗ ಸಲ್ಲದು : ಪುರಿ ಶ್ರೀಗಳ ಅಭಿಮತ

Shankarachar swamiji

ಉಡುಪಿ, ನ 28 -ರಾಮ ಜನ್ಮ ಭೂಮಿ – ಬಾಬರಿ ಮಸೀದಿ ವಿವಾದ ಇತ್ಯರ್ಥ ಸಂಬಂಧ ಸುಪ್ರೀಂಕೋರ್ಟ್ ನ ಐವರು ಸದಸ್ಯರ ನ್ಯಾಯಪೀಠ ನೀಡಿದ ತೀರ್ಪಿನ ಬಗ್ಗೆ ಪುರಿ ಗೋವರ್ಧನ ಮಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿ ಪೇಜಾವರ ಮಠಕ್ಕೆ ಆಗಮಿಸಿ, ವಿಶ್ವೇಶ್ವರ ತೀರ್ಥ ಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲು ಮುಸ್ಲಿಂ ಸಮುದಾಯಕ್ಕೆ ಐದು ಎಕರೆ ಜಮೀನು ನೀಡಬೇಕೆಂಬ ತೀರ್ಪು ನನಗೆ ಸಂತೋಷ ತಂದಿಲ್ಲ, ಸಮಾಧಾನ ತಂದಿಲ್ಲ ಎಂದು ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಹಿಂದಿನ ಅನುಭವಗಳನ್ನು ಬಿಡಿಸಿ ಹೇಳಿದ ಸ್ವಾಮೀಜಿ, “ಹಿಂದೆ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ, ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಮಸೀದಿ ನಿರ್ಮಾಣಕ್ಕೆ ಅನುಮೋದನೆ ನೀಡುವ ದಾಖಲೆಗೆ ಒಪ್ಪಿಗೆ ಸೂಚಿಸಿ ಸಹಿ ಹಾಕುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ನಾನು ಸಹಿ ಹಾಕಲಿಲ್ಲ. ಅಂದಿನ ಸರ್ಕಾರದ ಪ್ರಸ್ತಾವನೆಯನ್ನು ನಾನು ಒಪ್ಪಿಕೊಳ್ಳಲೂ ಇಲ್ಲ. ಆದರೆ ಈಗಿನ ಸರ್ಕಾರ ಐದು ಎಕರೆ ಜಮೀನು ಕೊಡಿಸಿದ ಕೀರ್ತಿ, ಗೌರವ ನನ್ನದೇ ಎಂದು ಹೇಳಿಕೊಳ್ಳುತ್ತಿರುವುದೂ ಕೂಡ ಸಮಂಜಸವಲ್ಲ” ಎಂದರು.

ಕೊನೆಯದಾಗಿ ಸಂಸತ್ತಿಗೆ ಪರಮಾಧಿಕಾರವಿದೆ. ಸುಪ್ರೀಂಕೋರ್ಟ್ ಗಿಂತಲೂ ಸಂಸತ್ತಿಗೆ ಹೆಚ್ಚಿನ ಅಧಿಕಾರವಿದೆ. ಹೇಳಿ, ಕೇಳಿ ಬಿಜೆಪಿ ಸರ್ಕಾರಕ್ಕೆ ಬಹುಮತ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ಸಮುದಾಯಕ್ಕೆ ಐದು ಎಕರೆ ಜಮೀನು ಕೊಡುವ ಆದೇಶವನ್ನು ರದ್ದುಪಡಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ