ಮುಂಬೈ, ಜ 10 ವಿದೇಶಿ ನೆಲದ ಪರಿಸ್ಥಿತಿಗಳಲ್ಲಿ ತಂಡ ಸುಧಾರಣೆ ಸಾಧಿಸುವ ಅಗತ್ಯವಿದೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಸಲಹೆ ನೀಡಿದ್ದಾರೆ.
ಭಾರತ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಆಸ್ಟ್ರೇಲಿಯಾ ತಂಡ ಇಲ್ಲಿಗೆ ಬಂದಿದೆ. ಮೊದಲನೇ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಜ. 14 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಯಕ ಫಿಂಚ್ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ವಿಶ್ವದ ಬಹುತೇಕ ತಂಡಗಳು ತವರು ನೆಲದಲ್ಲಿ ಪ್ರಗತಿ ಸಾಧಿಸುತ್ತಿವೆ. ನಾವೂ ವಿದೇಶಿ ನೆಲದಲ್ಲಿ ಸುಧಾರಣೆ ಕಂಡುಕೊಳ್ಳಬೇಕು," ಎಂದು ಹೇಳಿದ್ದಾರೆ.
ಕಳೆದ ವರ್ಷ ಆಸೀಸ್, ಭಾರತವನ್ನು 3-2 ಅಂತರದಲ್ಲಿ ಸೋಲಿಸಿ ಏಕದಿನ ಸರಣಿ ಮುಡಿಗೇರಿಸಿಕೊಂಡಿತ್ತು. ಇದೀಗ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ವಿಶ್ವಾಸದಲ್ಲಿ ಕಾಂಗೂರು ಪಡೆ, ಮತ್ತೊಂದು ಸರಣಿ ಗೆಲ್ಲುವ ತುಡಿತದೊಂದಿಗೆ ಎದುರು ನೋಡುತ್ತಿದೆ.
"ಕಳೆದ ಹಲವು ತಿಂಗಳುಗಳ ಹಿಂದೆ ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ಇದೀಗ ಮತ್ತೊಮ್ಮೆ ಅದೇ ಲಯ ಮುಂದುವರಿಸವ ಗುರಿ ಹೊಂದಿದ್ದೇವೆ. ಸಾಕಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿರಬಹುದು. ಆದರೆ, ವಿದೇಶಿ ನೆಲದ ವಾತಾವರಣಕ್ಕೆ ಹೊಂದಿಕೊಂಡು ಗೆಲುವು ಸಾಧಿಸುವುದು ಸವಾಲು. ಇತ್ತೀಚಿನ ದಿನಗಳಲ್ಲಿ ಬಹುತೇಕ ತಂಡ ತವರಿನಲ್ಲಿ ಬಲಿಷ್ಟ ತಂಡಗಳಾಗಿ ಹೊರ ಹೊಮ್ಮಿವೆ. ಹಾಗಾಗಿ, ಗೆಲುವಿನ ಲಯವನ್ನು ವಿದೇಶಿ ನೆಲದಲ್ಲೂ ಮುಂದುವರಿಸುವುದು ನಮ್ಮ ಪಾಲಿಗೆ ಕಠಿಣ ಸವಾಲಾಗಿದೆ," ಎಂದರು.
"ಭಾರತದ ಸವಾಲು ವಿಭಿನ್ನವಾಗಿದೆ. ಚೆಂಡನ್ನು ಪುಟಿದೇಳಿಸವ ಜಸ್ಪ್ರಿತ್ ಬುಮ್ರಾ, ಸ್ಥಿರ ಪ್ರದರ್ಶನ ತೋರುವ ರವೀಂದ್ರ ಜಡೇಜಾ, ಯಜವೇಂದ್ರ ಚಾಹಲ್ ಹಾಗೂ ಕುಲ್ದೀಪ್ ಯಾದವ್ ಇದ್ದಾರೆ. ಹಾಗಾಗಿ, ಇವರನ್ನು ನಾವು ಹಗುರವಾಗಿ ಪರಿಗಣಿಸುವ ಹಾಗೆಯೇ ಇಲ್ಲ. ಆದ್ದರಿಂದ ನಮ್ಮ ಆಟಕ್ಕೆ ತಕ್ಕಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ," ಎಂದು ಫಿಂಚ್ ತಿಳಿಸಿದರು.
"ಇದು ಅಂತರರಾಷ್ಟ್ರೀಯ ಕ್ರಿಕೆಟ್ ಆಗಿರುವುದರಿಂದ ದಿನದ ಕೊನೆಯಲ್ಲಿ ನೀವು ಏನನ್ನೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀವು ಒಂದಕ್ಕಿಂತ ಹೆಚ್ಚು ಒತ್ತು ನೀಡಲು ಸಾಧ್ಯವಿಲ್ಲ. ಇಲ್ಲದಿದ್ದರೆ ನೀವು ಬಹಳ ಕಡಿಮೆ ಸಮಯವನ್ನು ಕಾಣಬಹುದು," ಎಂದರು.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಸಜ್ಜಾಗವೆ. ಆಸೀಸ್ ಈಗಾಗಲೇ ಸವಾಲಿಗೆ ಕಠಿಣ ತಾಲೀಮು ಹಮ್ಮಿಕೊಂಡಿದೆ. ಆದರೆ, ಭಾರತ ತಂಡ ಶ್ರೀಲಂಕಾ ವಿರುದ್ಧ ಇಂದು ಕೊನೆಯ ಪಂದ್ಯವಾಡಲಿದೆ. ನಂತರ, ಆಸೀಸ್ ಸವಾಲು ಎದುರಿಸಲು ಸಿದ್ಧವಾಗಲಿದೆ. ಜನವರಿ 14, 17 ಹಾಗೂ 19 ರಂದು ಕ್ರಮವಾಗಿ ಮುಂಬೈ, ರಾಜ್ಕೋಟ್ ಹಾಗೂ ಬೆಂಗಳೂರಿನಲ್ಲಿ ಪಂದ್ಯಗಳು ಜರುಗಲಿವೆ.