ನರೇಗಾದಡಿ ಮೊರನಾಳ ಹಾಗೂ ಕಾಮನೂರುಗಳನ್ನು ದತ್ತು ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ: ಹಿಟ್ನಾಳ್

Moranal and Kamanoor have been selected as adoptive villages: Hitnal

ದತ್ತು ಗ್ರಾಮಗಳ ಅಡಿಗಲ್ಲು ಸಮಾರಂಭ 

ಕೊಪ್ಪಳ  29: ನರೇಗಾ ಯೋಜನೆಯಡಿ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಕೊಪ್ಪಳ ತಾಲ್ಲೂಕಿನ ಮೊರನಾಳ ಮತ್ತು ಕಾಮನೂರು ಗ್ರಾಮಗಳನ್ನು ದತ್ತು ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ್ ಹೇಳಿದರು.  

ಅವರು ಶುಕ್ರವಾರ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ದತ್ತು ಗ್ರಾಮಗಳ ಅಡಿಗಲ್ಲು ಸಮಾರಂಭ ಕುರಿತು ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರತಿ ಹಳ್ಳಿಗಳು ಸ್ವಾವಲಂಬಿಗಳಾಗಬೇಕೆಂಬುವುದು ಗಾಂಧೀಜಿಯವರ ಕನಸಾಗಿತ್ತು. ಭಾರತದ ಭವಿಷ್ಯವು ಹಳ್ಳಿಗಳಲ್ಲಿ ಅಡಗಿದೆ ಎಂದು ಅವರು ನಂಬಿದ್ದರು. ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ತಳಮಟ್ಟದಲ್ಲಿ ಪ್ರಾರಂಭಿಸಲು ಅತ್ಯಂತ ಸೂಕ್ತವಾದ ಸಾಧನವೆಂದರೆ ಪಂಚಾಯತ್ ರಾಜ್ ವ್ಯವಸ್ಥೆ, “ಸರಳ ಜೀವನ ಮತ್ತು ಉನ್ನತ ಚಿಂತನೆಯ ಮೂಲವನ್ನು ಆಧರಿಸಿ ಹಳ್ಳಿಗಳನ್ನು ಗ್ರಾಮ ಪಂಚಾಯಿತಿಗಳು ನಿಯಂತ್ರಿಸಿದರೆ ಭಾರತಕ್ಕೆ ಲಾಭವಾಗುತ್ತದೆ ಎಂಬ ಗಾಂಧೀಜಿಯವರ ನಂಬಿಕೆಯನ್ನು ಬಲಪಡಿಸುತ್ತದೆ ಎಂದರು.  

ಕಳೆದ ತಿಂಗಳು ನಡೆದ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿದಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಬೆಟಗೇರಿ ಗ್ರಾಮ ಪಂಚಾಯತಿಯ ಮೋರನಾಳ ಗ್ರಾಮ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಲೇಬಗೇರಿ ಗ್ರಾಮ ಪಂಚಾಯತಿಯ ಕಾಮನೂರು ಗ್ರಾಮಗಳನ್ನು ದತ್ತು ಗ್ರಾಮಗಳನ್ನಾಗಿ ಆಯ್ಕೆ ಮಾಡಿಕೊಂಡು ಗ್ರಾಮಕ್ಕೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳನ್ನು 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿ ಈ ಗ್ರಾಮಗಳನ್ನು ಮೂಲಭೂತ ಸೌಕರ್ಯ ಹೊಂದುವುದು ಮತ್ತು ಗ್ರಾಮೀಣ ನೈರ್ಮಲ್ಯ ಕಾಪಾಡುವ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸುವದಾಗಿದೆ ಎಂದು ಹೇಳಿದರು.  

ದತ್ತು ಗ್ರಾಮದ ಅಭಿವೃದ್ಧಿಗಾಗಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆಯಲಾಗಿದ್ದು ನ.30ರಂದು ಮೊರನಾಳ ಗ್ರಾಮದಲ್ಲಿ ಬೆಳಿಗ್ಗೆ 11 ಗಂಟೆಗೆ ಮತ್ತು ಅದೇ ದಿನದಂದು ಮಧ್ಯಾಹ್ನ 4 ಗಂಟೆಗೆ ಕಾಮನೂರು ಗ್ರಾಮದಲ್ಲಿ ಅಡಿಗಲ್ಲು ಸಮಾರಂಭವು ಜರುಗಲಿದೆ. ಈ ಸಮಾರಂಭದಲ್ಲಿ ಪರಮಪೂಜ್ಯ ಗವಿಮಠ ಶ್ರೀಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಶಾಸಕರು, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು, ಗೃಹಲಕ್ಷ್ಮಿ ಫಲಾನುಭವಿಗಳು, ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು, ನರೇಗಾ ಯೋಜನೆಯ ಫಲಾನುಭವಿಗಳು ಸೇರಿದಂತೆ ಆಯಾ ಗ್ರಾಮಗಳ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

ಮೊರನಾಳ ಗ್ರಾಮದ ಅಭಿವೃದ್ಧಿಗೆ 5.13 ಕೋಟಿ ರೂ. ಅನುದಾನ: ಮೊರನಾಳ ಗ್ರಾಮದಲ್ಲಿ ಕರೆ ಅಭಿವೃದ್ಧಿ, ವೈಯಕ್ತಿಕ ಕೃಷಿ ಹೊಂಡ ಕಾಮಗಾರಿ, ಬದು ನಿರ್ಮಾಣ, ದನದ ದೊಡ್ಡಿ, ಕುರಿ-ಮೇಕೆ ಸಾಕಾಣಿಕೆ ಶೆಡ್, ಶಾಲಾ ಕಂಪೌಂಡ್, ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ, ಶಾಲಾ ಮಳೆ ನೀರಿನ ಕೊಯ್ಲು, ಶಾಲಾ ಅಡುಗೆ ಕೋಣೆ, ಗ್ರಾಮೀಣ ಗೋದಾಮು, ಹೊಸ ಅಂಗನವಾಡಿ ಕಟ್ಟದ ನಿರ್ಮಾಣ, ರಸ್ತೆ ಕಾಮಗಾರಿಗಳು, ಚರಂಡಿ ಕಾಮಗಾರಿಗಳು, ಸ್ಮಶಾನ ಅಭಿವೃದ್ಧಿ ಹಾಗೂ ತೋಟಗಾರಿಕೆ ಇಲಾಖೆ ಕಾಮಗಾರಿಗಳಿಗೆ ನರೇಗಾ ಯೋಜನೆಯಡಿ 4.98 ಕೋಟಿ ರೂ. ಮೊತ್ತದಲ್ಲಿ ಮತ್ತು ಸಂಸದರ ನಿಧಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಈ ಗ್ರಾಮದಲ್ಲಿ ಎಲ್‌.ಇ.ಡಿ ವಿದ್ಯುತ್ ದೀಪಗಳ ಅಳವಡಿ ಸೇರಿದಂತೆ ಒಟ್ಟು 5.13 ಕೋಟಿ ರೂ. ಅನುದಾನದಲ್ಲಿ ಮೊರನಾಳ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು. 

ಕಾಮನೂರು ಗ್ರಾಮದ ಅಭಿವೃದ್ಧಿಗೆ 4.62 ಕೋಟಿ ರೂ. ಅನುದಾನ: ಕಾಮನೂರು ಗ್ರಾಮದಲ್ಲಿ ಕೆರೆ ಅಭಿವೃದ್ಧಿ, ವೈಯಕ್ತಿಕ ಕೃಷಿ ಹೊಂಡ ಕಾಮಗಾರಿ, ಬದು ನಿರ್ಮಾಣ, ವೈಯಕ್ತಿಕ ಬಚ್ಚಲ ಗುಂಡಿ, ದನದ ದೊಡ್ಡಿ, ಕುರಿ-ಮೇಕೆ ಸಾಕಾಣಿಕೆ ಶೆಡ್, ಶಾಲಾ ಕಂಪೌಂಡ್, ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ, ಶಾಲಾ ಪೋಷ್ಟಕ ತೋಟ, ಶಾಲಾ ಅಡುಗೆ ಕೋಣೆ, ಗ್ರಾಮೀಣ ಗೋದಾಮು, ಹೊಸ ಅಂಗನವಾಡಿ, ಎನ್‌.ಆರ್‌.ಎಲ್‌.ಎಂ ಶೆಡ್, ಗ್ರಾಮೀಣ ಸಂತೆ ಕಟ್ಟೆ, ರಸ್ತೆ ಕಾಮಗಾರಿಗಳು, ಚರಂಡಿ ಕಾಮಗಾರಿಗಳು, ಸ್ಮಶಾನ ಅಭಿವೃದ್ಧಿ, ತೋಟಗಾರಿಕೆ ಇಲಾಖೆ ಕಾಮಗಾರಿಗಳಿಗೆ ನರೇಗಾ ಯೋಜನೆಯಡಿ 4.47 ಕೋಟಿ ರೂ. ಮೊತ್ತದಲ್ಲಿ ಮತ್ತು ಸಂಸದರ ನಿಧಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ಎಲ್‌.ಇ.ಡಿ ವಿದ್ಯುತ್ ದೀಪಗಳ ಅಳವಡಿ ಸೇರಿದಂತೆ ಒಟ್ಟು 4.62 ಕೋಟಿ ರೂ. ಅನುದಾನದಲ್ಲಿ ಕಾಮನೂರು ಗ್ರಾಮದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದರು.  

ಎರಡೂ ಗ್ರಾಮಗಳ ಕಾಮಗಾರಿಗಳನ್ನು ನ.30ರಿಂದ ಪ್ರಾರಂಭಿಸಿ ಮಾರ್ಚ-2025ರ ಮಾಹೆಯ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸದಸ್ಯರಾದ ಸರಸ್ವತಿ ಇಟ್ಟಂಗಿ ಹಾಗೂ ಅಂಬಣ್ಣ, ಕೊಪ್ಪಳ ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ಗಣ್ಯರಾದ ಕೃಷ್ಣ ಇಟ್ಟಂಗಿ ಮತ್ತು ಜಿಲ್ಲೆಯ ಪತ್ರಕರ್ತರು ಸೇರಿದಂತೆ ಮತ್ತಿತರರಿದ್ದರು.