ಕೋವಿಡ್-19 ಹೋರಾಟಕ್ಕೆ ಚೆಸ್ ಆಟಗಾರರಿಂದ ಹಣ ಸಂಗ್ರಹ

ಮುಂಬಯಿ/ ಚೆನ್ನೈ, ಏ 8,ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕ್ರೀಡಾ ವಲಯದಿಂದ ಅಭೂತಪೂರ್ವ ಬೆಂಬಲ ಮುಂದುವರಿದಿದೆ. ಗ್ರ್ಯಾಂಡ್ ಮಾಸ್ಟರ್ ಪಿ. ಹರಿಕೃಷ್ಣ ಒಳಗೊಂಡಂತೆ ದೇಶದ ಚೆಸ್ ಆಟಗಾರರು ತಮ್ಮ ಕೊಡುಗೆಯಾಗಿ 3 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸುವ ಮೂಲಕ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ತಮ್ಮ ಕೈಲಾದಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಕೆಲವು ಯುವ ಚೆಸ್ ಆಟಗಾರರು ಆನ್ ಲೈನ್ ಟೂರ್ನಿಗಳನ್ನು ಸಂಘಟಿಸುವ ಮೂಲಕ 1.05 ಲಕ್ಷ ರೂ. ಸಂಗ್ರಹಿಸಿದರೆ, ಖ್ಯಾತ ತರಬೇತುದಾರ ಆರ್.ಬಿ. ರಮೇಶ್ ತಮ್ಮ ಚೆಸ್ ಗುರುಕುಲ್ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ.  ಈ ಗುರುಕುಲಕ್ಕೆ ಪಿ. ಹರಿಕೃಷ್ಣ 2 ಲಕ್ಷ ರೂ. ನೀಡಿದರೆ, ಕಾರ್ತಿಕೇಯನ್ ಮುರಳಿ 25 ಸಾವಿರ ರೂ. ನೀಡಿದ್ದಾರೆ. ಒಬ್ಬರು ಗ್ರ್ಯಾಂಡ್ ಮಾಸ್ಟರ್, ಏಳು ಅಂತಾರಾಷ್ಟ್ರೀಯ ಮಾಸ್ಟರ್ಸ್ , ಅನೇಕ ರಾಷ್ಟ್ರೀಯ ಚೆಸ್ ಚಾಂಪಿಯನ್ ಮತ್ತು ಉತ್ಸಾಹಿಗಳು ಒಗ್ಗೂಡಿ ದಿ ಚೆಸ್ಟರ್ ಗ್ರೂಪ್ ನ ಆಶ್ರಯದಲ್ಲಿ ಆನ್ ಲೈನ್ ಟೂರ್ನಿಯನ್ನು ಮಂಗಳವಾರ ಆಯೋಜಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸುಮಾರು 80 ಚೆಸ್ ಆಟಗಾರರು ಮತ್ತು ಉತ್ಸಾಹಿಗಳು ಪಿಎಂ-ಕೇರ್ಸ್ ನಿಧಿಗೆ 1.05 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಏತನ್ಮಧ್ಯೆ ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದರ ವಿರುದ್ಧದ ಹೋರಾಟಕ್ಕೆ ಹಾಕಿ ಇಂಡಿಯಾ ಬುಧವಾರ ಒಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ 21 ಲಕ್ಷ ರೂಪಾಯಿ ನೆರವು ನೀಡಿದೆ.