ಬೆಂಗಳೂರು, ಜ.17,ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಮನೆ, ಆಸ್ತಿ ಮಾಡುತ್ತಿದ್ದ ಕಾಲ ಈಗ ಬದಲಾಗಿದ್ದು, ಮಕ್ಕಳ ಮುಂದಿನ ಭವಿಷ್ಯಕ್ಕೆ ವಿದ್ಯೆ ಬಹಳ ಮುಖ್ಯ ಎಂಬುದನ್ನು ಅರಿತಿರುವ ಪೋಷಕರು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸಿಎಂಆರ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನರ ಮನಸ್ಥಿತಿ ಬದಲಾಗಿದ್ದು, ಶೂನ್ಯದಿಂದ ಕೋಟಿ ಕೋಟಿ ರೂಪಾಯಿಗಳನ್ನು ಸಂಪಾದಿಸುವ ಅಭಿಲಾಷೆ ಹೊಂದಿದ್ದರೂ, ಯುವ ಸಮೂಹ ಮೌಲ್ಯಾಧಾರಿತ ಹಾದಿಯಲ್ಲಿ ಹೆಜ್ಜೆ ಇಡುತ್ತಿದೆ. ಆರ್ಥಿಕವಾಗಿ ಸಬಲರಲ್ಲದಿದ್ದರೂ ಔದ್ಯಮಿಕ ವಲಯದಲ್ಲಿ ಯಶಸ್ವಿಯಾಗುವ ಸಾಮರ್ಥ್ಯ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿ ಸೋಮಣ್ಣ ಮಾತನಾಡಿ, ಸಿ. ಎಂ ಆರ್ ವಿದ್ಯಾ ಸಂಸ್ಥೆಯು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದು, ಮಕ್ಕಳ ಭವಿಷ್ಯ ರೂಪಿಸುವ ಪವಿತ್ರ ಕೆಲಸ ಮಾಡುತ್ತಿದೆ. ಕೆಲವು ಉತ್ತಮ ಶಿಕ್ಷಣ ಸಂಸ್ಥೆ ಗಳಲ್ಲಿ ಸಿಎಂಆರ್ ಸಹ ಸಹ ಒಂದಾಗಿದ್ದು, ರಾಜ್ಯದಲ್ಲಿ ಉತ್ತಮ ಹೆಸರು ಪಡೆದಿದೆ. ಇಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳಷ್ಟೇ ಅಲ್ಲದೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಇದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ವಿಶ್ವವಿದ್ಯಾಲಯವು ವಿಶ್ವದಲ್ಲೇ ಉತ್ತಮ ಹೆಸರು ಮಾಡಿದ್ದು, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಉತ್ತೇಜಿಸಲು ಸಂಸ್ಥೆಯು ವಿವಿಧ ಬಗೆಯ ವಿದ್ಯಾರ್ಥಿವೇತನ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಸಂವಹನ ಬಹಳ ಮುಖ್ಯವಾಗಿದ್ದು ಸತತ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಗಣ್ಯ ವ್ಯಕ್ತಿಗಳ ವ್ಯಕ್ತಿತ್ವವನ್ನು ಜೀವನದ ಮಾದರಿಯಾಗಿಸಿಕೊಂಡು ಅವರಂತೆ ಬದುಕಲು ಪ್ರಯತ್ನಿಸಬೇಕು. ಪ್ರತಿಯೊಬ್ಬರೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಟ್ರಸ್ಟಿ ಕೆ.ಸಿ ರಾಜರೆಡ್ಡಿ, ಕೆ.ಸಿ ಜಗನ್ನಾಥ ರೆಡ್ಡಿ, ಕೆಸಿ ರಾಮಮೂರ್ತಿ, ಮಾಜಿ ಮೇಯರ್ ನಟರಾಜ್, ಡಾ.ಸವಿತ, ವೈ ಎ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.