ಮಠಗಳು ಸನಾತನ ಧರ್ಮದ ಆಧಾರ ಸ್ತಂಭಗಳು : ಶಿವಲಿಂಗ ಸಿದ್ನಾಳ
ಮಹಾಲಿಂಗಪುರ 03: ದೇವಸ್ಥಾನಗಳು ಸಂಸ್ಕೃತಿಯ ತೊಟ್ಟಿಲುಗಳು. ಮಠಮಾನ್ಯಗಳು ಸನಾತನ ಧರ್ಮದ ಆಧರ ಸ್ತಂಭಗಳು ಎಂದು ಮಹಾಲಿಂಗಪುರದ ಕೆಎಲ್‌ಇ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಸಮೀಪದ ಮುಗಳಖೋಡ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳ 40ನೇ ಗುರುವಂದನಾ ಕಾರ್ಯಕ್ರಮದ ಪ್ರವಚನ ಉದ್ಘಾಟಿಸಿ ಮಾತನಾಡಿದರು.
ಪೂಜ್ಯರು ತಮ್ಮ 40ನೇ ಗುರುವಂದನಾ ಕಾರ್ಯಕ್ರಮವನ್ನು ದೇಶದ ನಾಲ್ಕು ಆಧಾರ ಸ್ತಂಭಗಳಾದ ಯೋಧ, ರೈತ, ವಿಜ್ಞಾನಿ ಮತ್ತು ಯುವ ವಿದ್ಯಾರ್ಥಿಗಳಿಗೆ ಸಮರ್ಿಸಿ ಅವರ ಹೆಸರಿನಲ್ಲಿ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಶಿಕ್ಷಣ್ ಎಂಬ ಪರಿಕಲ್ಪನೆ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದು ಶ್ಲಾಘನೀಯ.
ನಮ್ಮ ದೇಶಕ್ಕಾಗಿ ರಕ್ತ ಹರಿಸಿದ ಯೋಧರ ಹೆಸರಲ್ಲಿ ರಕ್ತದಾನ ಮಾಡುವುದೇ ಜೈ ಜವಾನ್, ದೇಶಕ್ಕೆ ಅನ್ನ ಹಾಕುವ 40 ಸಾವಿರ ರೈತರ ತಲೆ ಮೇಲೆ ವಿಮಾನದ ಮೂಲಕ ಹೂಮಳೆಗರೆಯುವುದೇ ಜೈ ಕಿಸಾನ್, ಚಂದ್ರಯಾನ ಯಶಸ್ವಿಗೊಳಿಸಿದ ಇಸ್ರೋ ಸಂಸ್ಥೆಗೆ ಸಿದ್ದಶ್ರೀ ಪ್ರಶಸ್ತಿ ನೀಡುವುದೇ ಜೈ ವಿಜ್ಞಾನ್, 500ಕ್ಕೂ ಅಧಿಕ ತುಲಾಭಾರದಿಂದ ಬರುವ ಕೋಟ್ಯಂತರ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುವುದೇ ಜೈ ಶಿಕ್ಷಣ್. ಇಂಥ ಮೌಲ್ಯಕ ಕಾರ್ಯಕ್ರಮ ಮಾಡುವ ಮೂಲಕ ದೇಶಕ್ಕೆ ಶಕ್ತಿ ತುಂಬುವ ಕಾರ್ಯವನ್ನು ಶ್ರೀಮಠ ಮಾಡುತ್ತಿರುವುದು ಸಾರ್ಥಕವಾಗಿದೆ.
ದೇವರು ಎಲ್ಲಾ ಕಡೆ ಇರುವಾಗ ಮಠಕ್ಕೇ ಯಾಕೆ ಬರಬೇಕು? ಎಂದು ಉದಾಸೀನ ಮಾಡಬೇಡಿ. ಟೈರ್ ಪಂಕ್ಚರ್ ಆದಾಗ ಗಾಳಿ ಎಲ್ಲಾ ಕಡೆ ಇದೆ ಅಂತ ಟ್ಯೂಬಿನಲ್ಲಿ ಗಾಳಿ ತುಂಬಿಸಲು ಸಾಧ್ಯವಿಲ್ಲ. ಅದಕ್ಕೆ ಪಂಕ್ಚರ್ ಅಂಗಡಿಗೇ ಹೋಗುವಂತೆ ದೇವರನ್ನು ಕಾಣಲು ಮಠಗಳಿಗೇ ಹೋಗಬೇಕು. ಗಳಿಸಿದ ಸಂಪತ್ತನ್ನು ಬೇರೆ ದೇಶಕ್ಕೆ ಒಯ್ಯಬೇಕಾದರೆ ಹೇಗೆ ಅಲ್ಲಿನ ಕರೆನ್ಸಿಗೆ ಕನ್ವರ್ಟ್ ಮಾಡುತ್ತೇವೆಯೋ ಹಾಗೇ ಸತ್ತ ಮೇಲೆ ಸಂಪತ್ತನ್ನು ಸ್ವರ್ಗಕ್ಕೆ ಕೊಂಡೊಯ್ಯಬೇಕಾದರೆ ಸಂಪತ್ತನ್ನು ಮಠಮಾನ್ಯಗಳಿಗೆ ಮತ್ತು ದಾನಗಳಿಗೆ ಖರ್ಚು ಮಾಡುವ ಮೂಲಕ ಪುಣ್ಯ ಎಂಬ ಕರೆನ್ಸಿಗೆ ಕನ್ವರ್ಟ್ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಮಠದ ಪೀಠಾಧಿಪತಿಗಳಾದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಇದು ಭಕ್ತಿಯ ಮಠ, ಶಕ್ತಿಯ ಮಠ, ಮುಕ್ತಿಯ ಮಠವಾಗಿದೆ. ಈ ಮಠಕ್ಕೆ ಜಾತಿ ಎಂಬುದಿಲ್ಲ. ಎಲ್ಲ ಕ್ಷೇತ್ರದ ಸಾಧಕರನ್ನು ಸರ್ವ ಜನಾಂಗದ ಭಕ್ತರನ್ನು ಉದ್ದರಿಸುವ ಉಪಕಾರಿ ಮಠವಾಗಿದೆ. ಯಾವ ಮಠಗಳೂ ಮಾಡದಂಥ ಸಹಸ್ರಾರು ರೈತರ ಮೇಲೆ ಹೂಮಳೆ ಸುರಿಸುವ ಗೌರವದ ಕೆಲಸವನ್ನು ವಿಶ್ವ ದಾಖಲೆಯ ರೀತಿಯಲ್ಲಿ ಮಾಡುವ ಮೂಲಕ ಸಮಾಜಕ್ಕೆ ಅನ್ನದಾತನ ಮಹತ್ವ ತಿಳಿಸುವ ಸಂದೇಶ ನೀಡುತ್ತಿದೆ ಎಂದರು.