ನವದೆಹಲಿ, ಜ 19: ಮೋದಿ ಕಳ್ಳ ಎಂದು 2019 ರ ಮಾರ್ಚ್ 23 ರಂದು ನಡೆದ ಸಾರ್ವತ್ರಿಕ ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಹೇಳಿಕೆ ಸಂಬಂಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಂಚಿ ಸಿವಿಲ್ ಕೋರ್ಟ್ ಸಮೆನ್ಸ್ ಜಾರಿ ಮಾಡಿದೆ.
ಈ ಸಂಬಂಧ ಫೆಬ್ರವರಿ 22 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದೆ. ಇದಕ್ಕೂ ಮೊದಲು ರಾಂಚಿ ನ್ಯಾಯಾಲಯ ಜನವರಿ 18 ರಂದು ತನ್ನ ಮುಂದೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಸಮನ್ಸ್ ನೀಡಿತ್ತು.
ರಾಹುಲ್ ತಮ್ಮ ಭಾಷಣದಲ್ಲಿ, 'ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ' ... ಇವರೆಲ್ಲರಿಗೂ ಸಮಾನ ಅಂಶವೆಂದರೆ ಹೆಸರಿನ ಕೊನೆಯಲ್ಲಿ ಮೋದಿ ಎಂಬ ಹೆಸರು ಏಕಿದೆ? ಎಂದು ಪ್ರಶ್ನಿಸಿ, ಎಲ್ಲಾ ಕಳ್ಳರ ಮನೆಯ ಹೆಸರು ಮೋದಿ ಎಂಬುದಾಗಿದೆ. ಇನ್ನೆಷ್ಟು ಮಂದಿ ಮೋದಿಗಳು ಬಯಲಿಗೆ ಬರಲಿದ್ದಾರೋ ನೋಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಯ ವಿರುದ್ದ ಮಧ್ಯಪ್ರದೇಶದ ಭೋಪಾಲ್ನ ಪ್ರದೀಪ್ ಮೋದಿ ಎಂಬ ವ್ಯಕ್ತಿ ಸಿವಿಲ್ ನ್ಯಾಯಾಲಯದಲ್ಲಿ ಖಟ್ಲೆ ದಾಖಲಿಸಿದ್ದಾರೆ. ' ನಿಮಗೆ ಬೇಕಾದರೆ, ಸಂಬಂಧ ಪಟ್ಟ ವ್ಯಕ್ತಿಯ ಹೆಸರನ್ನು ಹೇಳಿ ಅವರ ವಿರುದ್ದ ಆರೋಪ ಮಾಡಿದರೆ ಯಾರು ವಿರೋಧಿಸುವುದಿಲ್ಲ. ಇಡೀ ಒಂದು ಸಮುದಾಯ ಉದ್ದೇಶಿಸಿ ಹೇಳಿಕೆ ನೀಡುವುದು ಮಾತ್ರ ತೀವ್ರ ಆಕ್ಷೇಪಾರ್ಹ. ನಾನು ನ್ಯಾಯಾಲಯಕ್ಕೆ ಬಂದಾಗ, ಕೆಲ ಸ್ನೇಹಿತರು ನನ್ನ ಬಗ್ಗೆ ಗೇಲಿ ಮಾಡಿದರು. ಇದರಿಂದ ತಮ್ಮ ಮನಸಿಗೆ ತೀವ್ರ ನೋವಾಗಿದೆ. ಹಾಗಾಗಿ ಈ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದೇನೆ" ಎಂದು ಅರ್ಜಿದಾರರು ತಿಳಿಸಿದ್ದಾರೆ.