ಮುಂದಿನ ವರ್ಷದಿಂದ ಮೋದಿ ಕನಸಿನ ಬುಲೆಟ್ ರೈಲು ಕಾಮಗಾರಿ ಆರಂಭ

ಮುಂಬೈ, ಆ 20      ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಯ ಭೂಸ್ವಾಧೀನಕ್ಕೆ ಇದ್ದ ಅಡ್ಡಿ ಆತಂಕಗಳು ಈಗ ನಿವಾರಣೆಯಾಗಿದ್ದು ಮುಂದಿನ ವರ್ಷದ ಮಾರ್ಚ್ - ಏಪ್ರಿಲ್ ನಿಂದ ಕಾಮಗಾರಿ ಪ್ರಾರಂಭವಾಗಿ, 2023 ಕ್ಕೆ ರೈಲು ಸೇವೆಗೆ ಚಾಲನೆ ದೊರಕಲಿದೆ.   
ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ನ ಬುಲೆಟ್ ರೈಲು ಯೋಜನೆಗೆ ಮಹಾರಾಷ್ಟ್ರದಲ್ಲಿ ಭೂಸ್ವಾಧೀನ ಬಹಳ ದೊಡ್ಡ ತೊಡಕಾಗಿ ಪರಿಣಮಿಸಿತ್ತು. ಈಗ ಭೂಸ್ವಾಧೀನದ ಅಡ್ಡಿ ಆತಂಕಗಳು ಬಹುತೇಕ ನಿವಾರಣೆಯಾಗಿದೆ.   
ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿಲೋಮೀಟರ್ ಬುಲೆಟ್ ರೈಲು ಕಾಮಗಾರಿ ಮುಂದಿನ ವರ್ಷದ ಮಾರ್ಚ್ - ಏಪ್ರಿಲ್ ನಿಂದ ಆರಂಭವಾಗಿ  2023 ರ ವೇಳೆಗೆ ಕಾಮಗಾರಿ ಸಂಪೂರ್ಣ ಮುಗಿದು ರೈಲು ಸಂಚಾರವೂ ಆರಂಭವಾಗಲಿದೆ.  
ಸರ್ಕಾರಿ ಭೂಮಿ 154 ಹೆಕ್ಟೇರ್ ಹಾಗೂ ರೈಲ್ವೆ ಇಲಾಖೆಯಲ್ಲಿನ 127 ಹೆಕ್ಟೇರ್ ಭೂಮಿ ಜೊತೆಗೆ 1ಸಾವಿರದ 379 ಹೆಕ್ಟೇರ್ ಖಾಸಗಿ ಭೂಮಿಯನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 
ಈ ಬುಲೆಟ್ ರೈಲು ಮಹಾರಾಷ್ಟ್ರದಲ್ಲಿ 155 ಕಿಲೋಮೀಟರ್ ಹಾಗೂ ಗುಜಾರಾತ್ ನಲ್ಲಿ 350 ಕಿಲೋಮೀಟರ್ ದೂರ ಹಾದು ಹೋಗಲಿದೆ. 
ಮುಂಬೈ ಮತ್ತು ಅಹಮದಾಬಾದ್ ನಡುವೆ ಒಟ್ಟು 12 ರೈಲು ನಿಲ್ದಾಣಗಳು ಬರಲಿವೆ. ಈ ಮೊದಲು ನಿಗದಿಯಾಗಿದ್ದಂತೆ 2022 ರ ವೇಳೆಗೆ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಳ್ಳುವ ವೇಳೆಗೆ ದೇಶದ ಮೊದಲ ಬುಲೆಟ್ ರೈಲು ಮುಂಬೈ - ಅಹಮದಾಬಾದ್ ನಡುವೆ ಸಂಚಾರ ಮಾಡಬೇಕು ಎಂಬುದು ಮೋದಿ ಅವರ ಮಹಾನ್ ಕನಸಾಗಿತ್ತು. ಆದರೆ ಭೂಸ್ವಾಧೀನದ ಅಡ್ಡಿ ಆತಂಕಗಳಿಂದಾಗಿ ಈಗ ಯೋಜನೆ ಜಾರಿ ಒಂದು ವರ್ಷ ತಡವಾಗಲಿದೆ ಎಂದು ಹೇಳಲಾಗುತ್ತಿದೆ. 
ಮುಂದಿನ ವರ್ಷದಿಂದ ಕಾಮಗಾರಿ ಆರಂಭವಾಗಿ 2023 ರ ಕೊನೆಯ ವೇಳೆಗೆ ಮುಗಿಯಲಿದ್ದು ಅದೇ ವರ್ಷದ ಕೊನೆ ವೇಳೆಗೆ ಮುಂಬೈ ಮತ್ತು ಅಹಮದಾಬಾದ್ ನಡುವೆ ಒಂದು ಲಕ್ಷ ಕೋಟಿ ರೂ ಬಜೆಟ್ ನ ಬುಲೆಟ್ ರೈಲು ಸಂಚಾರ ಮಾಡಲಿದೆ.