ನವದೆಹಲಿ, ಜನವರಿ 16 - ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕರೊಂದಿಗೆ ಬಂಧಿಸಲ್ಪಟ್ಟಿರುವ ಅಮಾನತುಗೊಂಡ ಡಿವೈಎಸ್‌ಪಿ ದೇವಿಂದರ್ ಸಿಂಗ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ, ಭಾರತದ ವಿರುದ್ಧ ದೇಶದ್ರೋಹವೆಸಗಿರುವುದಕ್ಕಾಗಿ ಸಿಂಗ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಮ್ಮು ಕಾಶ್ಮೀರ ಪೊಲೀಸರು ಯಾರನ್ನು ಮತ್ತು ಯಾಕಾಗಿ ರಕ್ಷಿಸುತ್ತಿದ್ದಾರೆ ? ಎಂದು ರಾಹುಲ್ ಪ್ರಶ್ನಿಸಿದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ಅಪ್‌ಲೋಡ್ ಮಾಡಿರುವ ರಾಹುಲ್ ಗಾಂಧಿ, ಪುಲ್ವಾಮಾ ದಾಳಿಯಲ್ಲಿ ದೇವಿಂದರ್ ಸಿಂಗ್ ಅವರ ಪಾತ್ರವೇನು ಮತ್ತು ಅವರು ಎಷ್ಟು ಭಯೋತ್ಪಾದಕರಿಗೆ ಸಹಾಯ ಮಾಡಿದ್ದಾರೆ ? ಎಂದು ಪ್ರಶ್ನಿಸಿದ್ದಾರೆ.
ಡಿವೈಎಸ್‌ಪಿ ದೇವಿಂದರ್ ಸಿಂಗ್ ಅವರು ಮೂವರು ಭಯೋತ್ಪಾದಕರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ಅವರನ್ನು ದೆಹಲಿಗೆ ಕರೆದೊಯ್ಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಅವರನ್ನು 6 ತಿಂಗಳೊಳಗೆ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಮತ್ತು ತಪ್ಪಿತಸ್ಥರಾಗಿದ್ದರೆ, ಅವರಿಗೆ ಭಾರತದ ವಿರುದ್ಧ ದೇಶದ್ರೋಹವೆಸಗಿದ ಕಾರಣಕ್ಕಾಗಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ.
'# ಟೆರರಿಸ್ಟ್ ದೇವಿಂದರ್ ಕವರ್ ಅಪ್' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ರಾಹುಲ್ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಭಯೋತ್ಪಾದಕ ಡಿಎಸ್‌ಪಿ ದೇವಿಂದರ್ ಸಿಂಗ್ ಬಗ್ಗೆ ಸರ್ಕಾರ ಮೌನವಾಗಿದೆ. ದೇವಿಂದರ್ ಸಿಂಗ್ ಬಗ್ಗೆ ಪ್ರಧಾನಿ, ಗೃಹ ಸಚಿವರು ಮತ್ತು ಎನ್ಎಸ್ಎ ಏಕೆ ಮೌನವಾಗಿದೆ? ಪುಲ್ವಾಮಾ ದಾಳಿಯಲ್ಲಿ ದೇವಿಂದರ್ ಸಿಂಗ್ ಪಾತ್ರವೇನು? ಅವರು ಎಷ್ಟು ಮಂದಿ ಭಯೋತ್ಪಾದಕರಿಗೆ ಸಹಾಯ ಮಾಡಿದ್ದಾರೆ? ಅವನನ್ನು ಯಾರು ರಕ್ಷಿಸುತ್ತಿದ್ದರು ಮತ್ತು ಏಕೆ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.