ಮೋದಿ, ಅಮಿತ್ ಶಾಗೆ ದೆಹಲಿ ಜನರಿಂತ ತಕ್ಕ ಪಾಠ: ವಿ.ಎಸ್.ಉಗ್ರಪ್ಪ

ಬಳ್ಳಾರಿ, ಫೆ 11, ದೆಹಲಿಯ ಬೀದಿ ಬೀದಿ ತಿರುಗಿ ಚುನಾವಣೆ ಎದುರಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜಧಾನಿ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ಬಿಜೆಪಿಯ ವಿಭಜಕ ನೀತಿಗಳನ್ನು ಜನತೆ ತಿರಸ್ಕರಿಸಿದ್ದಾರೆ. ಮತೀಯ ಶಕ್ತಿಗಳನ್ನು ದೆಹಲಿ ಜನತೆ ಮುಗಿಸಲು ಮುನ್ನುಡಿ ಬರೆದಿದ್ದಾರೆ. ಇನ್ನಾದರೂ ಬಿಜೆಪಿ ನಾಯಕರು ಸೂಕ್ತ ರೀತಿಯಲ್ಲಿ ಆಡಳಿತ ನಡೆಸಲು ಮುಂದಾಗಲಿ ಎಂದರು. 

ಸಂವಿಧಾನ ಬದಲಿಸಲು ಬಂದಿದ್ದೇವೆ ಎನ್ನುವ ಇವರು ವಾಲ್ಮೀಕಿ ಜನ ಈ ದೇಶದ ಮೂಲ‌ ನಿವಾಸಿಗಳಲ್ಲ ಎಂದು ಉದ್ಧಟತನದಿಂದ ಮಾತನಾಡುತ್ತಾರೆ. ಇವರ ಸರ್ವಾಧಿಕಾರಿ ಧೋರಣೆಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರರು.ದೆಹಲಿಯಲ್ಲಿ ಕಾಂಗ್ರೆಸ್ ಗೆ ತೀವ್ರ ಹಿನ್ನೆಡೆಯಾಗಿದ್ದು, ಈ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು‌ ಜನತೆ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ ಆರ್ಥಿಕ ದುಸ್ಥಿತಿ ಎದುರಾಗಿದ್ದು, ಸರ್ಕಾರದ ಚೆಕ್ ಗಳು ಬೌನ್ಸ್ ಆಗುತ್ತಿವೆ. ಆದಾಯ ಸಂಗ್ರಹದಲ್ಲಿ ಹಿನ್ನೆಡೆಯಾಗಿದ್ದು, ಮುಂದಿನ ಬಜೆಟ್ ಸಿದ್ಧಪಡಿಸಲು ಯಡಿಯೂರಪ್ಪ ತಿಣುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಡಿಯೂರಪ್ಪ ಅವರು ಪಕ್ಷಾಂತರಿಗಳ‌ ಮುನಿಸು ಸರಿ‌ಮಾಡುವಲ್ಲಿ‌ ಕಾಲ ಹರಣ ಮಾಡುತ್ತಿದ್ದಾರೆ ಎಂದರು. ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವುದಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿರುವುದು ಸ್ವಾಗತಾರ್ಹ ಬೆಳವಣಿಗೆ. ಜಿಲ್ಲೆಯನ್ನು ಇಬ್ಭಾಗ ಮಾಡುವ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದು ಉಗ್ರಪ್ಪ ಹೇಳಿದರು. 

ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಬಿದ್ದಿದ್ದು, ಈ ಕುರಿತು ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಮುಖಂಡರ ಸಭೆ ಕರೆದು ಚರ್ಚೆ ನಡೆಸಿ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು. ನ್ಯಾಯಾಲಯದ ತೀರ್ಪು ಗೌರವಿಸಬೇಕು ಆದರೆ ಪ್ರಕರಣದಲ್ಲಿ ವಾದ ಮಂಡಿಸುವಾಗ ನೀಡುವ ದಾಖಲೆಗಳ‌ ಮೇಲೆ ತೀರ್ಪು ಹೊರ ಬರುತ್ತದೆ. ಕೇಂದ್ರದ ಎನ್ ಡಿ ಎ ಸರಕಾರ ನ್ಯಾಯಾಲಯಕ್ಕೆ ಮೀಸಲಾತಿ ಅಗತ್ಯತೆ ಬಗ್ಗೆ ಸೂಕ್ತ ದಾಖಲೆ ನೀಡದಿರುವುದೇ ಇಂತಹ ತೀರ್ಪಿಗೆ ಕಾರಣ ಎಂದು ಉಗ್ರಪ್ಪ ಆರೋಪಿಸಿದರು.  ಸಾಮಾಜಿಕ ನ್ಯಾಯದ ಬಗ್ಗೆ ಬದ್ದತೆ ಇದ್ದರೆ ಇಂತಹ ತೀರ್ಪು ಬರುತ್ತಿರಲಿಲ್ಲ. ನ್ಯಾಯಾಲಯದ ತೀರ್ಪು ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಮಾಜ ಕಲ್ಯಾಣ ಸಚಿವರು ಸುಮ್ಮನೇ ಇರುವುದನ್ನು ನೋಡಿದರೆ ಅವರು ಬಯಸಿದಂತೆಯೇ ತೀರ್ಪು ಬಂದಿದೆ ಎಂದು ಭಾವಿಸಬೇಕಾಗುತ್ತದೆ. ಅದಕ್ಕಾಗಿ ಈ ಕುರಿತು ಜನತೆಗೆ ತಿಳಿಸುವ ಮತ್ತು ಹೋರಾಟ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದರು.