ಮೋದಿ – ರಾಜಪಕ್ಸೆ ಮಾತುಕತೆ

ನವದೆಹಲಿ, ಫೆ 8  ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ನವದೆಹಲಿಯಲ್ಲಿ ಮಾತುಕತೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ವಿದೇಶಾಂಗ ಸಚಿವ ಡಾ|| ಎಸ್.ಜೈಶಂಕರ್ ಅವರನ್ನೂ ಭೇಟಿಯಾಗಲಿದ್ದಾರೆ. ಐದು ದಿನಗಳ ಭಾರತ ಪ್ರವಾಸಕ್ಕೆ ರಾಜಪಕ್ಸೆ ಗುರುವಾರ ನವದೆಹಲಿಗೆ ಆಗಮಿಸಿದರು. ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವ ಸಂಜಯ್ ಶಮರಾವ್ ಧೋತ್ರೆ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.ಶ್ರೀಲಂಕಾದ ಪ್ರಧಾನ ಮಂತ್ರಿಗಳಿಗೆ ಇಂದು ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತ ನೀಡಲಾಗುವುದು. ರಾಷ್ಟ್ರಪಿತಾ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲು ರಾಜಪಕ್ಸೆ ರಾಜ್‌ಘಾಟ್‌ಗೆ ಭೇಟಿ ನೀಡಲಿದ್ದಾರೆ. ವಾರಣಾಸಿ, ಸಾರನಾಥ್, ಬೋಧಗಯಾ ಮತ್ತು ತಿರುಪತಿ ಸೇರಿದಂತೆ ಐತಿಹಾಸಿಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ರಾಜಪಕ್ಸೆ ಅವರು ಪ್ರಧಾನ ಮಂತ್ರಿಯಾದ ನಂತರ ವಿದೇಶಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಅವರೊಂದಿಗೆ ಉನ್ನತ ಮಟ್ಟದ ನಿಯೋಗವಿದ್ದು, ಇದರಲ್ಲಿ ಸಚಿವರು, ಸಂಸದರು ಮತ್ತು ಶ್ರೀಲಂಕಾದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದಾರೆ.ನವೆಂಬರ್‌ನಲ್ಲಿ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರ ಭೇಟಿಯ ಸಂದರ್ಭದಲ್ಲಿ ಭಾರತ ಘೋಷಿಸಿದ ಹೊಸ 450 ದಶಲಕ್ಷ ಅಮೆರಿಕನ್ ಡಾಲರ್ ಸಾಲದಡಿಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ವಿವರಗಳು ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ. ಉಭಯ ದೇಶಗಳ ನಡುವೆ ಈಗಾಗಲೇ ಇರುವ ಬಲವಾದ ಸಂಬಂಧಕ್ಕೆ ಈ ಸಭೆಗಳು ಇನ್ನಷ್ಟು ಪುಷ್ಠಿ ನೀಡಲಿವೆ ಎಂದು ರಾಜಪಕ್ಸೆ ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.