ಬಿಜೆಪಿಯಿಂದ ಕೇಂದ್ರೀಯ ಸಂಸ್ಥೆಗಳ ದುರುಪಯೋಗ: ದಿನೇಶ್ ಗುಂಡೂರಾವ್

ಬೆಂಗಳೂರು, ಅ 1:     ಮಾಜಿ  ಉಪ ಮುಖ್ಯಮಂತ್ರಿ  ಡಾ. ಜಿ ಪರಮೇಶ್ವರ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷವನ್ನು ಹಣಿಯಲು ಬಿಜೆಪಿ ಪ್ರಯತ್ನಿಸುತ್ನಿದೆ. ಜನರು ಇದನ್ನು ಯಾವತ್ತೂ ಒಪ್ಪುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಹಂಕಾರದಲ್ಲಿ ಸರ್ಕಾರವನ್ನು ನಡೆಸುತ್ತಿದೆ. ಅಧಿವೇಶನವನ್ನು ಮೂರೇ ದಿನ ಯಾಕೆ ಕರೆದಿದ್ದು ? ಪ್ರವಾಹ ಹಾಗೂ ಬರದ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಆದರೆ  ಸರ್ಕಾರದ ನಡೆ ಬೇಸರ ತರಿಸುತ್ತಿದೆ ಎಂದು ಹೇಳಿದರು. ಬಿಜೆಪಿಯಲ್ಲಿ ಎಷ್ಟು ಭ್ರಷ್ಟರಿದ್ದಾರೆ. ಅವರ ಮಂತ್ರಿಗಳ ಮೇಲೆ ಸಾಕಷ್ಟು ಆರೋಪಗಳಿವೆ. ಅವರ ಮನೆಯ ಮೇಲೆ ಯಾಕೆ ದಾಳಿ ನಡೆಯುತ್ತಿಲ್ಲ. ? ಸೇಡಿನ ರಾಜಕೀಯವನ್ನು ಶುರು ಮಾಡಿ ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಕೇಂದ್ರ ಸರ್ಕಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.