ನವದೆಹಲಿ, ಏ 10,ಕೋವಿಡ್ -19 ರೋಗದ ಪರಿಣಾಮ ಪ್ರಯಾಣ ನಿರ್ಬಂಧಗೊಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಅಮೆರಿಕದಲ್ಲಿ ಸಿಲುಕಿರುವ ಹಾಕಿ ಒಲಿಂಪಿಯನ್ ಮತ್ತು 1975ರ ವಿಶ್ವ ಕಪ್ ವಿಜೇತ ತಂಡದ ಸದಸ್ಯ ಅಶೋಕ್ ದಿವಾನ್ ಅವರಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ನೆರವಿನ ಭರವಸೆ ನೀಡಿದ್ದಾರೆ.ಪ್ರಕರಣ ಸಂಬಂಧ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಗಿದೆ ಮತ್ತು ಪ್ರಸ್ತುತ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಅಶೋಕ್ ದಿವಾನ್ ಅವರಿಗೆ ತಕ್ಷಣದ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ, ಎಂದು ರಿಜಿಜು ಅವರ ಕಚೇರಿ ಗುರುವಾರ ಸಂಜೆ ಮಾಹಿತಿ ನೀಡಿದೆ. 1976ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದಿವಾನ್, ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ನಾರಿಂದರ್ ಬಾತ್ರಾ ಅವರಿಗೆ ಸಹಾಯ ಕೋರಿ ಪತ್ರ ಬರೆದಿದ್ದರು. ಇದಕ್ಕೆ ಕ್ರೀಡಾ ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಾಧ್ಯವಾಗುವ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದೆ.