ಯಶಸ್ಸುಕಂಡ ರನ್ನವೈಭವ-2025 ಅಧಿಕಾರಿ, ಸಿಬ್ಬಂದಿಗಳನ್ನು ಅಭಿನಂದಿಸಿದ ಸಚಿವ ತಿಮ್ಮಾಪೂರ

Minister Thimmapura congratulated the officers and staff for the successful Runnavaibhava-2025.

 ಯಶಸ್ಸುಕಂಡ ರನ್ನವೈಭವ-2025  ಅಧಿಕಾರಿ, ಸಿಬ್ಬಂದಿಗಳನ್ನು ಅಭಿನಂದಿಸಿದ ಸಚಿವ ತಿಮ್ಮಾಪೂರ 

ಬಾಗಲಕೋಟೆ, 01 : ಮುಧೋಳದಲ್ಲಿ ಮೂರು ದಿನಗಳ ಕಾಲ ಜರುಗಿದ ರನ್ನ ವೈಭವ-2025ರ ಅಭೂತಪೂರ್ವ ಯಶಸ್ಸಿಗೆ ಹಗಲಿರುಳೆನ್ನದೇ ಶ್ರಮಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅಧಿಕಾರೇತರ ಸದಸ್ಯರಿಗೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಅಭಿನಂದನೆ ಸಲ್ಲಿಸಿದರು. 

ಮುಧೋಳ ರನ್ನ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರನ್ನ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರನ್ನವೈಭವದಿಂದ ಇಂದು ಮುಧೋಳ ರಾಜ್ಯದಾದ್ಯಂತ ಹೆಸರು ಮಾಡಿದ್ದು, ಈ ಅಭೂತಪೂರ್ವ ಯಶಸ್ಸಿಗೆ ಜಿಲ್ಲೆಯ ಡಿ ದರ್ಜೆಯ ಸಿಬ್ಬಂದಿಯಿಂದ ಹಿಡಿದು ಡಿಸಿ, ಎಸ್‌.ಪಿ, ಸಿಇಓ ಹಾಗೂ ಎಸಿ ಮಟ್ಟದ ಅಧಿಕಾರಿಗಳೆಲ್ಲ ತಮ್ಮ ಮನೆಯ ಉತ್ಸವವೆಂಬಂತೆ ತಿಳಿದು ಹಗಲಿರುಳೆನ್ನದೆ ಅಲ್ಪ ಸಮಯದಲ್ಲಿಯೇ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ನಿರ್ವಹಿಸಿದ್ದಾರೆ ಎಂದರು. 

      ಬಾಗಲಕೋಟ ಪೋಲೀಸ್ ವರಿಧಿಕಾರಿ ಅಮರನಾಥ್ ರೆಡ್ಡಿ ತಾವೊಬ್ಬ ಮೇಲ್ಮಟ್ಟದ ಅಧಿಕಾರಿ ಎನ್ನದೇ ಪೋಲೀಸ್ ಪೇದೆಯಂತೆ ಕಾರ್ಯ ನಿರ್ವಹಿಸಿರುವುದು, ಜಮಖಂಡಿ ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ್‌ ತಾನೊಬ್ಬ ಎಸಿ ಎಂಬುದನ್ನು ಮರೆತು ಸ್ವಯಂ ಸೇವಕರಂತೆ ಕಾರ್ಯ ನಿರ್ವಹಿದ್ದು ಮರೆಯಲಾಗದಂತಹ ಕ್ಷಣವಾಗಿದೆ ಎಂದರು.  

  ರನ್ನ ವೈಭವ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಡಿನ ಹೆಸರಾಂತ ಗಾಯಕರು ರನ್ನ ವೈಭವದ ಸ್ಟೇಟಸ್, ಸ್ಟೋರಿಗಳಲ್ಲಿ ರನ್ನ ವೈಭವ ರಾಜ್ಯದಲ್ಲಿ ನಡೆಯುತ್ತಿರುವ ಅನೇಕ ಉತ್ಸವಗಳಿಗಿಂತ ಅದ್ಧೂರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಮೂರು ದಿನವೂ ಬೆಂಗಳೂರಿನಿಂದ ಕಾರ್ಯಕ್ರಮ ವೀಕ್ಷಿಸಿದ ಅಧಿಕಾರಿ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಕಂಡು ಪುಳಕಿತನಾಗಿದ್ದೇನೆ. ಈ ಕಾರ್ಯಕ್ರಮಕ್ಕೆ ಮುಧೋಳ ಜನತೆ ಹಾಗೂ ಜಿಲ್ಲೆಯ ಉದ್ಯಮಿದಾರರಿಗೆ, ರನ್ನ ಅಭಿಮಾನಿಗಳಿಗೆ, ರನ್ನ ಪ್ರತಿಷ್ಠಾನದ ಸದಸ್ಯರಿಗೆ, ಕನ್ನಡ ಸಂಘಟನೆಗಳಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಸಾಹಿತಿ ಶಿಕ್ಷಕರ ಜೊತೆ ಸೇರಿ ಜಿಲ್ಲೆಯ ಸಮಸ್ತ ಜನತೆಗೆ ಅಭಿನಂದಿಸುತ್ತಿರುವುದಾಗಿ ತಿಳಿಸಿದರು.   

     ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡುತ್ತ, ಲಕ್ಷಾಂತರ ಜನರಿಂದ ಅದ್ದೂರಿಯಾಗಿ ನಡೆದ ಈ ಉತ್ಸವ ನಮಗೆ ಹೊಸ ಅನುಭವ ನೀಡಿದೆ.  ಈ ರನ್ನ ವೈಭವದಲ್ಲಿ ಎಲ್ಲ ಪ್ರಕಾರದ ಕಲಾವಿದರನ್ನು ಕಾಣುವುದಲ್ಲದೇ ನಮ್ಮ ಅಧಿಕಾರಿಗಳಲ್ಲೂ ಕಲಾವಿದರಿದ್ದಾರೆ ಎಂದು ತಿಳಿಯುವಂತಾಯಿತು ಎಂದರು. 

     ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಮಾತನಾಡಿ, ಸಂಘಟನೆ ಎಂದರೇನು ಎಂಬುದನ್ನು ರನ್ನ ವೈಭವ ತಿಳಿಸಿಕೊಟ್ಟಿದೆ. ಈ ಕಾರ್ಯಕ್ರಮದ ಸಂಘಟನೆಗೆ ಕಳೆದ ಒಂದು ತಿಂಗಳಿನಿಂದ ತಯಾರಿ ನಡೆದಿದ್ದು, ಪ್ರತಿಯೊಂದು ಸ್ಥಳದಲ್ಲಿ ಜನರಿಗೆ ತೊಂದರೆಯಾಗದಂತೆ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ವಿಚಾರ ಸಂಕಿರಣ ಕಾರ್ಯಕ್ರಮಗಳಲ್ಲಿ ಯಾವುದೇ ಅಡಚಣೆ ಉಂಟಾಗದೆ ಇದ್ದದ್ದು ಸಂತೋಷ ತಂದಿದೆ ಎಂದರು.  

    ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕಳೆದ ಆರು ವರ್ಷಗಳಿಂದ ರನ್ನನ ನಾಡಿನಲ್ಲಿ ಉತ್ಸವವಾಗದೇ ಜನರಲ್ಲಿ ನಿರಾಸೆಯಾಗಿತ್ತು. ಈ ರನ್ನ ವೈಭವದಿಂದ ಆರು ವರ್ಷಗಳ ಕನಸು ನನಸಾಗಿದೆ. ರನ್ನ ವೈಭವ ಅದ್ಧೂರಿಯಾಗಿ ನಡೆಯಲು 72 ಗ್ರಾಮಗಳ ಹಾಗೂ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರನ್ನ ರಥ ಸಂಚರಿಸಿತ್ತು ಎಂದರು.  

     ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಅಭಿನಂದನಾ ಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತೋಟಗಾರಿಕೆ ಉಪನಿರ್ದೇಶಕರಾದ ರವೀಂದ್ರ ಹಕಾಟಿ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಎಸ್ ಎಚ್ ಕರಡಿಗುಡ್ಡ, ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ್ ಜೈನಾಪುರ, ಜಮಖಂಡಿ ಡಿವೈಎಸ್ಪಿ ಶಾಂತಗಿರಿ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಧೋಳ ತಹಶೀಲ್ದಾರ್ ಮಹಾದೇವ ಸನಮುರಿ ಸರ್ವರನ್ನೂ ಸ್ವಾಗತಿಸಿದರು.