ಅನಧಿಕೃತ ಮರಳುಗಾರಿಕೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ -ಸಚಿವ ಶಿವಾನಂದ ಪಾಟೀಲ
ಹಾವೇರಿ 08: ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಾವೇರಿ ಭಾಗದಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಇದನ್ನು ಗಂಭಿರವಾಗಿ ಪರಿಗಣಿಸಬೇಕು ಹಾಗೂ ಅನಧಿಕೃತ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವಿಷಯವಾಗಿ ಅನಧಿಕೃತ ಮರಳುಗಾರಿಕೆಯಿಂದ ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಾಗುತ್ತದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಏನು ಮಾಡ್ತೀರಿ, ಇಂತಹ ಪ್ರಕರಣಗಳನ್ನು ಗಮನಿಸಬೇಕು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದ ಕಾರಣ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ, ಅನಧಿಕೃತ ಮರಳುಗಾರಿಕೆಗೆ ಸಂಬಂಧಿಸಿದಂತೆ ಈವರೆಗೆ ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ, ಎಷ್ಟು ವಾಹನಗಳನ್ನು ಶೀಜ್ ಮಾಡಲಾಗಿದೆ, ಎಷ್ಟು ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನೆಮಾಡಿದರು ಹಾಗೂ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾವಹಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಅನಧಿಕೃತ ಮರಳುಗಾರಿಕೆ ತಡೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 2021-22ರಲ್ಲಿ 65 ಪ್ರಕರಣ ದಾಖಲಿಸಲಾಗಿದೆ ಹಾಗೂ ರೂ.25 ಲಕ್ಷ ದಂಡ, 2022-23ರಲ್ಲಿ 35 ಪ್ರಕರಣ ದಾಖಲಿಸಲಾಗಿದೆ ಹಾಗೂ ರೂ.12 ಲಕ್ಷ ಹಾಗೂ 2023-24ರಲ್ಲಿ ರೂ.23 ಲಕ್ಷ ದಂಡ ವಸೂಲಿ ಮಾಡಲಾಗಿದ ಎಂದು ಮಾಹಿತಿ ನೀಡಿದರು.
ಕಳೆದ ಡಿಸೆಂಬರ್ ಮಾರ್ಗಸೂಚಿ ಅನುಸಾರ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ, ಜಿಲ್ಲೆಯಲ್ಲಿ 55 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ, 12 ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಅನೀರೀಕ್ಷಿತ ದಾಳಿ ನಡೆಸಿ ಅನಧಿಕೃತ ಮರಳುಗಾರಿಗೆ ತಡೆಗೆ ಕ್ರಮವಹಿಸಲಾಗಿದೆ. ಕರೂರ ಬಳಿ ಕಳೆದ 40 ವರ್ಷಗಳಿಂದ ನಡೆಯುತ್ತಿದ್ದ ಅನಧಿಕೃತ ಮರಳುಗಾರಿಕೆ ಸ್ಥಗಿತಗೊಳಿಸಲಾಗಿದೆ ಎಂದು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಅಕ್ರಮ ಮರಳುಗಾರಿಕೆಯಲ್ಲಿ ಪಿಎಸ್‌ಐ ಹಾಗೂ ಸಿಪಿಐಗಳು ಶ್ಯಾಮಿಲಿರುವುದಾಗಿ ದೂರುಗಳು ಕೇಳಿ ಬರುತ್ತಿವೆ, ಈ ಕುರಿತು ಕೂಲಕುಂಷವಾಗಿ ಪರೀಶೀಲಿಸಿ ಅಂತವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ಗ್ಯಾಂಬ್ಲಿನ್ ತಡೆಗೆ ಸೂಚನೆ: ಜಿಲ್ಲೆಯಲ್ಲಿ ಜಾತ್ರೆ ಸೇರಿದಂತೆ ವಿವಿಧೆಡೆ ಮಟ್ಕಾ ಹಾಗೂ ಗ್ಯಾಂಬ್ಲಿನ್ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ದೂರುಗಳಿದ್ದು, ಪೊಲೀಸ್ ಇಲಾಖೆ ಏನು ಮಾಡುತ್ತಿದ್ದೆ. ಗ್ಯಾಂಬ್ಲಿನ್ ಹಾವಳಿಯಿಂದ ಎಷ್ಟು ಸಂಸಾರಗಳು ಬೀದಿಗೆ ಬರುತ್ತವೆ. ಗ್ಯಾಂಬ್ಲಿನ್ ತಡೆಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು ಮಾತನಾಡಿ, ಜಾತ್ರೆ ಸೇರಿದಂತೆ ವಿವಿಧೆಡೆ ನಿಗಾವಹಿಸಲಾಗುತ್ತದೆ ಹಾಗೂ ಪೊಲೀಸ್ ಪೊಲೀಸ್‌ರನ್ನು ಸಹ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ 143 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ರಮ ಸಾರಾಯಿ ಮಾರಾಟ ತಡೆಗೆ ಸೂಚನೆ: ಜಿಲ್ಲೆಯಲ್ಲಿ ಕಿರಾಣಿ ಅಂಗಡಿ ಸೇರಿದಂತೆ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ, ದಂಡ ಹಾಕಿದರೆ ಸಾಲದು ಅವರ ಲೈಸನ್ಸ್ ರದ್ದು ಮಾಡಬೇಕು. ನಿಯಮ ಉಲ್ಲಂಘನೆಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿ ಸೂಚನೆ ನೀಡಿದರು.
ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ ಬಗ್ಗೆ ನಿಗಾ ವಹಿಸಿ: ಜಿಲ್ಲೆಯಲ್ಲಿ ಅಪಡಿತ ಅಕ್ಕಿ ಅಕ್ರಮ ಸಂಗ್ರಹಣೆಗಾರರ ಬಗ್ಗೆ ತೀವ್ರ ನಿಗಾವಹಿಸಬೇಕು. ಅಂತರ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮವಹಿಸಬೇಕು. ಜಿಲ್ಲೆಯಲ್ಲಿರುವ ಅಕ್ಕಿ ಮಿಲ್‌ಗಳಿಗೆ ಅನೀರೀಕ್ಷಿತ ಭೇಟಿ ನೀಡಬೇಕು. ಜಿಲ್ಲೆಯಲ್ಲಿ ಎಷ್ಟು ಅಕ್ಕಿ ಮಿಲ್‌ಗಳಿಗೆ ಎಂದು ಆಹಾರ ಇಲಾಖೆ ಅಧಿಕಾರಿಗಳನ್ನು ಪಶ್ನಿಸಿದರು.
ಅಕ್ರಮ ಅಕ್ಕಿ ಸಾಗಾಣಿಕೆ ಕುರಿತು 2021-22ರಲ್ಲಿ 11, 22-23ರಲ್ಲಿ 10, 23-24ರಲ್ಲಿ 15 ಹಾಗೂ 24-25ರಲ್ಲಿ 07 ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 19 ರಂದು ಅಕ್ಕಿ ಮಿಲ್ ಇವೆ, ಆಗಾಗ ಭೇಟಿ ನೀಡಲಾಗುತ್ತಿದೆ ಆಹಾರ ಮತ್ತು ನಾಗರಿಕ ಇಲಾಖೆ ಸರಬರಾಜು ಇಲಾಖೆ ಅಧಿಕಾರಿ ರಮೇಶ ಅವರು ಸಭೆಗೆ ಮಾಹಿತಿ ನೀಡಿದರು.
ಆಗ ಸಚಿವರು, ಎಪಿಎಂಸಿ ಅಧಿಕಾರಿಗಳನ್ನು ಕರೆದು ಜಿಲ್ಲೆಯಲ್ಲಿ ಎಷ್ಟು ಅಕ್ಕಿ ಮಿಲ್ ಎಂದು ಪ್ರಶ್ನಿಸಿದಾಗ ಅವರು, 19 ಇದೆ ಎಂದು ಮಾಹಿತಿ ನೀಡಿದರು. ಸಚಿವರು ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲೆಯಲ್ಲಿರುವ ಅಕ್ಕಿ ಮಿಲ್‌ಗಳ ವಿದ್ಯುತ್ ಸಂಪರ್ಕದ ಮಾಹಿತಿ ನೀಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಪಡಿತರ ಅಂಗಡಿಗಳಲ್ಲಿ ತೂಕದಲ್ಲಿ ಮೋಸಮಾಡುವ ಅಂಗಡಿ ಲೈಸನ್ ರದ್ದು ಮಾಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಲಿನ ಪುಡಿ ಪ್ರಕರಣ: ಹಾನಗಲ್ ತಾಲೂಕಿನಲ್ಲಿ ಅಕ್ಟೋಬರ್, ನವಂಬರ್ ಹಾಗೂ ಡಿಸೆಂಬರ ಮಾಹೆಯಲ್ಲಿ ಅಂಗನವಾಡಿಗಳಿಗೆ ಹಾಲಿನ ಪುಡಿ ಯಾಕೆ ಸರಬರಾಜು ಮಾಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಕೇಳಿದಾಗ ಕೆಎಂಎಫ್ ಬಿಲ್ ಬಾಕಿ ಇದೆ, ಅದಕ್ಕೆ ಸರಬರಾಜು ಮಾಡಿಲ್ಲ ಎಂದು ಹೇಳಿದ್ದರು, ಆದರೆ ಕೆಎಂಎಫ್‌ನವರು ಹಾನಗಲ್ ಸಿಡಿಪಿಒ ಇಂಡೆಂಟ್ ಕೊಟ್ಟಿಲ್ಲ ಎಂದು ಹೇಳುತ್ತಾರೆ. ಇದು ನಿಮ್ಮ ಗಮನಕ್ಕೆ ಬಂದಿಲ್ವಾ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಮಾನತ್‌ಗೆ ಸೂಚನೆ: ಹಿಂದೆ ಮೊಟ್ಟೆ ಹಾಗೂ ಈಗ ಹಾಲಿನ ಪುಡಿ ಪ್ರಕರಣ ನಿಮ್ಮ ಅವಧಿಯಲ್ಲೆ ಆಗಿದೆ ಎಂದು ಸಚಿವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ಹಾಗೂ ಇದರಲ್ಲಿ ನಿರ್ಲಕ್ಷ್ಯ ತೋರಿದವರನ್ನು ಅಮಾನತ್ ಮಾಡಬೇಕು ಎಂದು ಜಿ.ಪಂ.ಸಿಇಒ ಅವರಿಗೆ ನಿರ್ದೇಶನ ನೀಡಿದರು.
ಹೊಸ ಬಡಾವಣೆಗೆ ಅನುಮತಿ ನೀಡುವಾಗ ನಿಯಮಾನುಸಾರ ಮುಖ್ಯ ರಸ್ತೆ ಬದಿಯಲ್ಲಿ ರಸ್ತೆ ಬರಬೇಕು ಆದರೆ, ರಸ್ತೆ ಬದಿಯಲ್ಲಿ ಕಮರ್ಷಿಯಲ್‌ಗೆ ನಕ್ಷೆ ತಯಾರಿಸಲಾಗಿದೆ. ಹೇಗೆ ಅನುಮತಿ ನೀಡಲಾಗಿದೆ. ನಿಯಮಾನುಸಾರ ನಕ್ಷೆ ತಯಾರಿಸದ ಬಡಾವಣೆಗಳ ಅನುಮತಿ ರದ್ದು ಮಾಡಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಹಾಗೂ ಹೂಡಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್. ಮಹರ್ಷಿ ವಾಲ್ಮೀಕಿ, ದೇವರಾಜ ಅರಸು ನಿಗಮ ಸೇರಿದಂತೆ ವಿವಿಧ ನಿಗಮಗಳ, ಸಾಮಾಜಿಕ, ಪ್ರಾದೇಶಿಕ ಅರಣ್ಯ ಇಲಾಖೆ, ಕೈಗಾರಿಕೆ, ಕೆ.ಆರ್.ಐಡಿಎಲ್, ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ನಡೆಸಿದರು.
ಸಭೆಯಲ್ಲಿ ಶಾಸಕರಾದ ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.