ಸಾರ್ವಜನಿಕರ ಅಹವಾಲು ಆಲಿಸಿದ ಸಚಿವ ಸತೀಶ

ಚಿಕ್ಕೋಡಿ 19: ಮಳೆಯಿಂದ ಹಾನಿಯಾದ ರಸ್ತೆಗಳನ್ನು ದುರಸ್ತಿ ಮಾಡುವ ಕಾರ್ಯ ಸರ್ಕಾರ ಮಾಡುತ್ತದೆ. ಯಾವ ರಸ್ತೆ ಹಾಳಾಗಿದೆಂದು ಅಧಿಕಾರಿಗಳು ಗಮನ ಹರಿಸಿ ಅದಕ್ಕೆ ಟೆಂಡರ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. 

ಇಲ್ಲಿನ ಸಂಸದರ ಕಚೇರಿಯಲ್ಲಿ ಸಾರ್ವಜನಿಕ ಅಹ್ವಾಲು ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕಳೆದ ಮೂರು ನಾಲ್ಕು ವರ್ಷದಲ್ಲಿಯೇ ಈ ಭಾರಿ ಅಧಿಕ ಮಳೆಯಾಗಿದೆ. ಇದರಿಂದ ರಸ್ತೆಗಳು ಹಾಳಾಗಿವೆ. ಮಳೆ ನಿಂತ ಮೇಲೆ ರಸ್ತೆ ದುರಸ್ಥೆ ಮಾಡುವ ಕಾರ್ಯ ಆರಂಭಿಸಲಾಗುತ್ತದೆ ಎಂದರು. 

ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯಾಗಲು ಪ್ರಸ್ತಾಪ ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚಿಕ್ಕೋಡಿ ಜಿಲ್ಲೆಯಾಗುವುದು ಶತಸಿದ್ಧ, ಆದರೆ ಈವಾಗಲೇ ಘೋಷಣೆ ಆಗುತ್ತದೆಂದು ಹೇಳಲಿಕ್ಕೆ ಆಗುವುದಿಲ್ಲ, ಜಿಲ್ಲೆಯಾಗಲು ಅದಕ್ಕೂ ಕಾಲ ಕೂಡಿಬರಬೇಕು. ಈ ಅಧೀವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯಾಗುದಿಲ್ಲ ಎಂದರು. 

ಪ್ರಸಕ್ತ ವರ್ಷದಲ್ಲಿ ಕಬ್ಬಿನ ಹಂಗಾಮು ಆರಂಭವಾಗುತ್ತದೆ. ಸರ್ಕಾರ ಎಫ್‌ಆರ್‌ಪಿ ದರ ಘೋಷಣೆ ಮಾಡಿದೆ. ಆದರೆ ಎಫ್‌ಆರ್‌ಪಿಕ್ಕಿಂತ ಹೆಚ್ಚಿಗೆ ದರವನ್ನು ಎಲ್ಲ ಕಾರ್ಖಾನೆಗಳು ರೈತರಿಗೆ ಬಿಲ್ ನೀಡಿವೆ. ಯಾವುದಾದರೂ ಕಾರ್ಖಾನೆ ಬಾಕಿ ಬಿಲ್ ಉಳಿಸಿಕೊಂಡಿದ್ದರೆ ಜಿಲ್ಲಾಧಿಕಾರಿಗಳು ಸೂಕ್ತ ಗಮನ ಹರಿಸಿ ಪರಿಹಾರ ಕಂಡುಕೊಳ್ಳುತ್ತಾರೆ ಎಂದರು. 

ಇದಕ್ಕೂ ಮೊದಲು ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಅಥಣಿ, ಕಾಗವಾಡ,ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ಕ್ಷೇತ್ರಗಳಿಂದ ಆಗಮೀಸಿದ ಸಾರ್ವಜನಿಕರ ವಿವಿಧ ಅರ್ಜಿಗಳನ್ನು ಪಡೆದ ಸಚಿವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಪರಿಹರಿಸಲು ಸೂಚಿಸಿದರು. 

ಧುರೀಣರಾದ ಮಹಾವೀರ ಮೋಹಿತೆ, ಉತ್ತಮ ಪಾಟೀಲ, ಪಿ.ಐ.ಕೋರೆ, ಸಿದ್ದಪ್ಪ ಮರಾ​‍್ಯಯಿ, ರಾಜೇಶ ಕದಮ್, ಅರ್ಜುನ ಗುರನಾಥ, ರಾಜು ಕೊಠಗಿ, ನ್ಯಾಯವಾದಿ ಎಚ್‌.ಎಸ್‌.ನಸಲಾಪೂರೆ ಮುಂತಾದವರು ಇದ್ದರು.