2.73 ಕೋಟಿ ಅಕ್ರಮ ನಗದು ಹಣ ಸಾಗಾಣೆ : ಇಬ್ಬರ ಬಂಧನ, ಹಣ, ವಾಹನ ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ : ಯಾವದೇ ದಾಖಲೆ ಇಲ್ಲದೆ ಕೋಟ್ಯಾಂತರ ರೂ. ನಗದು ಹಣವನ್ನು ವಾಹನ ಒಂದರಲ್ಲಿ ಅಕ್ರಮವಾಗಿ ಸಾಗಿಸುವದನ್ನು ಪತ್ತೆ ಮಾಡಿರುವ ಬೆಳಗಾವಿಯ ಮಾಳ‌ಮಾರುತಿ ಠಾಣೆಯ ಪೊಲೀಸರು ಹಣ ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.


    ಹಣ ಸಾಗಾಣೆ ಮಾಡುತ್ತಿದ್ದ ಸಚಿನ್ ಮೇನಕುದಳಿ, ಸಾ : ಸಾಂಗಲಿ, ಮಹಾರಾಷ್ಟ್ರ ಹಾಗೂ ಮಾರುತಿ ಮಾರಗುಡೆ, ಸಾ: ಸಾಂಗಲಿ, (ಮಹಾರಾಷ್ಟ್ರ) ಇವರನ್ನು ವಶಕ್ಕೆ ಪಡೆಯಲಾಗಿದೆ.

  ಬೆಳಗಾವಿ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಕಾ&ಸು) ಹಾಗೂ ಉಪ ಪೊಲೀಸ್ ಆಯುಕ್ತರು(ಅ&ಸಂ) ಅವರ ಮಾಗದರ್ಶನದಲ್ಲಿ ನಗರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸ್ ಇನ್ಸ್‌ಪೆಕ್ಟರ್  ನಂದೀಶ್ವರ ಕುಂಬಾರ ಹಾಗೂ ಅವರ ತಂಡ ಶುಕ್ರವಾರ ದಿ: 18 ರಂದು ಸಾಯಂಕಾಲ ಸಾಂಗಲಿಯಿಂದ ಹುಬ್ಬಳ್ಳಿ ಕಡೆಗೆ ಅಶೋಕ ಲೈಲ್ಯಾಂಡ್ ದೋಸ್ತ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಹಣವನ್ನು ಸಾಗಾಣೆ ಮಾಡುತ್ತಿದ್ದ ಮಾಹಿತಿ ಮೇರೆಗೆ ಈ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

    ಇವರಿಂದ ಒಟ್ಟು ರೂ. 2,73,27,500 ನಗದು ಹಣ ವಶಪಡಿಸಿಕೊಂಡಿದ್ದು, ಈ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಾಣೆ ಮಾಡಲು ವಾಹನದ ಕ್ಯಾಬಿನ್‌ನಲ್ಲಿ ಮಾರ್ಪಾಡು ಮಾಡಿದ್ದು ಕಂಡು ಬಂದಿದ್ದು, ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಪ್ತದ ಹಣದ ಬಗ್ಗೆ ಕುಲಂಕುಶವಾದ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.