ವಿಜಯಪುರ, ನ. 26: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಚಿವ ಎಂ. ಬಿ. ಪಾಟೀಲ ಅವರು ಬಬಲೇಶ್ವರ ಮತಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ರೂ. 100 ಕೋ. ವೆಚ್ಚದಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡು ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ತಿಕೋಟಾ ತಾಲೂಕಿನ ಅರಕೇರಿ ಮತ್ತು ಅತಾಲಟ್ಟಿ ಗ್ರಾಮಗಳಲ್ಲಿ ಇಂದು ಮಂಗಳವಾರ ನಾನಾ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿ ಅವರು ಮಾತನಾಡಿದರು.
ಅರಕೇರಿಯಲ್ಲಿ ಭೂಮಿಪೂಜೆ
ಅರಕೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ಆರ್.ಇ.ಡಿ ಇಲಾಖೆಯ ವತಿಯಿಂದ ತಲಾ ರೂ. 84.35 ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅರಕೇರಿ-ಕನ್ನಾಳ 6 ಕಿ.ಮೀ, ಅರಕೇರಿ- ಲೋನಾರ ತಾಂಡಾವರೆಗೆ 6 ಕಿ.ಮೀ ಮತ್ತು ಅರಕೇರಿ ಎಲ್.ಟಿ- 1 ರಿಂದ ಬರಟಗಿ ಎಲ್.ಟಿ- 4ರ ವರೆಗೆ 4 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರೆವೆರಿಸಿದರು. ಬಳಿಕ ಮಾತನಾಡಿದ ಅವರು ಸಚಿವರು ಬಬಲೇಶ್ವರ ಮತಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಯ ಮೂಲಕ ಮಾದರಿಯಾಗಿ ಮಾಡಿದ್ದಾರೆ. ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮುಮ್ಮೆಟ್ಟಿಗುಡ್ಡ ಅಮೋಘಸಿದ್ದ ದೇವಸ್ಥಾನಕ್ಕೆ ಬರುವ ಭಕ್ತರ ಪ್ರಯಾಣಕ್ಕೆ ಅನಕೂಲ ಮಾಡಿದ್ದಾರೆ ಎಂದು ತಿಳಿಸಿದರು.
ಈ ಭಾಗದಲ್ಲಿ ಇನ್ನೂ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು ನಾನಾ ಹಂತದಲ್ಲಿ ಪ್ರಗತಿಯಲ್ಲಿವೆ. ಸ್ಥಳೀಯ ಮುಖಂಡರು ಇನ್ನುಳಿದ ಕೆಲಸಗಳ ಬಗ್ಗೆ ಲಿಖಿತವಾಗಿ ಬೇಡಿಕೆ ಸಲ್ಲಿಸಬೇಕು. ಈ ಬೇಡಿಕೆಗಳ ಕುರಿತು ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಸಂಬಂಧಿಸಿದ ಸಚಿವರ ಗಮನ ಸೆಳೆದು ಈಡೇರಿಸಲು ಕ್ರಮ ಕೈಕೊಳ್ಳುವದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಣ್ಣ ಸಕ್ರಿ, ಅರ್ಜುನ ರಾಠೋಡ, ಪೀರ ಪಟೇಲ, ನಿಂಗು ಬೆಳ್ಳುಬ್ಬಿ, ಶ್ರೀಶೈಲ ದಳವಾಯಿ, ರಂಗಾ ಬರಕಡೆ, ಹುಸೇನಸಾಬ ಮನಗೂಳಿ, ಸುರೇಶ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.
ಅತಾಲಟ್ಟಿಯಲ್ಲಿ ಭೂಮಿಪೂಜೆ
ಅತಾಲಟ್ಟಿಯಲ್ಲಿ ಪಿ.ಆರ್.ಇ.ಡಿ ಇಲಾಖೆಯ ವತಿಯಿಂದ ರೂ. 150 ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅತಾಲಟ್ಟಿ- ವಿಜಯಪುರ ರೆಡಿಯೋ ಕೇಂದ್ರದ ವರೆಗಿನ ರಸ್ತೆ ಮತ್ತು ರೂ. 16.85 ಲಕ್ಷ ವೆಚ್ಚದ ಅತಾಲಟ್ಟಿ- ಖತಿಜಾಪೂರ ವರೆಗಿನ 4 ಕಿ.ಮೀ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಭಾಗದಲ್ಲಿ ಬಡವರ ಮಕ್ಕಳು ವಿದ್ಯಾವಂತರಾದರೆ ಭವಿಷ್ಯದಲ್ಲಿ ಹತ್ತಾರು ದೇವಸ್ಥಾನ ನಿರ್ಮಿಸಬಹುದು. ಈ ಹಿನ್ನಲೆಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಈ ಬಾರಿ ಶಿಕ್ಷಣಕ್ಕೆ ಒತ್ತು ನೀಡಿದ್ದು, ಅರಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ಇದನ್ನು ಅರಿತು ಗ್ರಾಮಸ್ಥರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾಳಪ್ಪ ಶಿವಪ್ಪ ಸೊನ್ನದ, ಮಾಳಪ್ಪ ಲಚ್ಚಪ್ಪ ಸೊನ್ನದ, ಪರಶುರಾಮ ಸೊನ್ನದ, ಗುಡದಪ್ಪ ಜಾಲಮಟ್ಟಿ, ಮಹಾಂತೇಶ ಹಾದಿಮನಿ, ಬಾಪು ಜಾಲಮಟ್ಟಿ, ಶಾಸಪ್ಪ ಹಂಚಿನಾಳ, ಉಮರಸಿಂಗ್ ಪವಾರ, ನಾನು ರಾಠೋಡ ಮುಂತಾದವರು ಉಪಸ್ಥಿತರಿದ್ದರು.